ಬೆಂಗಳೂರು: ಇನ್ಮುಂದೆ ಊಟ ತಿಂಡಿ ಮಾಡುವಾಗ ತಿನ್ಬೇಕಾ ತಿನ್ಬಾರ್ದಾ ಅಂತ ಯೋಚನೆ ಮಾಡಿ ತಿನ್ನಿ. ಕಾಟನ್ ಕ್ಯಾಂಡಿ, ಗೋಬಿ, ಬಟಾಣಿ, ಕಬಾಬ್ ಬಳಿಕ ಇದೀಗ ಪನ್ನೀರ್ ಸರದಿ ಶುರುವಾಗಿದೆ. ಪನ್ನೀರ್ ಪ್ರಿಯರಿಗೆ ಆಹಾರ ಇಲಾಖೆ ಬಿಗ್ ಶಾಕ್ ಕೊಟ್ಟಿದೆ.

ಇನ್ಮುಂದೆ ಪನ್ನೀರ್ ಸೇವನೆ ಮಾಡುವಾಗ ಜಾಗರೂಕರಾಗಿರಿ. ಯಾಕೆಂದರೆ ಆಹಾರ ಇಲಾಖೆ ಪನ್ನೀರ್ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಹೇಳಿದೆ. ಹಲವೆಡೆ ದಾಳಿ ಮಾಡಿ ಸಂಗ್ರಹಿಸಿದ ಪನ್ನೀರ್ ಸೇವನೆಗೆ ಅಸುರಕ್ಷಿತ ಎಂದು ಲ್ಯಾಬ್ ಟೆಸ್ಟ್ ರಿಪೋರ್ಟ್ ಬಹಿರಂಗವಾಗಿದೆ.
ಹೌದು ಆಹಾರ ಇಲಾಖೆ ಪರೀಕ್ಷೆಯಲ್ಲಿ ಆತಂಕಕಾರಿ ವಿಚಾರವೊಂದು ಬಯಲಾಗಿದೆ. ಪನ್ನೀರ್ನಲ್ಲಿ ಕ್ಯಾಲ್ಶಿಯಂ, ಪ್ರೋಟಿನ್ ಕಡಿಮೆ ಇರುವುದು ವರದಿಯಿಂದ ತಿಳಿದು ಬಂದಿದೆ. ಅಲ್ಲದೆ ಈ ಪನ್ನೀರ್ ಅನ್ನು ಮೃದುವಾಗಿಸಲು ಕೆಮಿಕಲ್ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಈ ಕೆಮಿಕಲ್ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದ ಕಿಡ್ನಿ ಸಮಸ್ಯೆ ಕೂಡ ಹೆಚ್ಚಾಗಬಹುದು. ಇದಲ್ಲದೆ ಕ್ಯಾನ್ಸರ್ಗೂ ಇದು ಕಾರಣವಾಗಬಹುದು ಎಂದು ವರದಿಯಲ್ಲಿ ಬಹಿರಂಗವಾಗಿದೆ.
80ಕ್ಕೂ ಹೆಚ್ಚು ಕಡೆ ಆಹಾರ ಇಲಾಖೆಯ ಅಧಿಕಾರಿಗಳು ಪನ್ನೀರ್ ಸ್ಯಾಂಪಲ್ ಅನ್ನು ಸಂಗ್ರಹಿಸಿ ಟೆಸ್ಟ್ ಗೆ ಕಳುಹಿಸಿದ್ದರು. ಈ ಪರೀಕ್ಷಾ ವರದಿಯಲ್ಲಿ ಕೆಮಿಕಲ್ ಬಳಕೆ ಮಾಡಿರುವುದು ಲ್ಯಾಬ್ ಟೆಸ್ಟ್ ರಿಪೋರ್ಟ್ನಲ್ಲಿ ಬಹಿರಂಗವಾಗಿದೆ. ಪನ್ನೀರ್ ಸಾಫ್ಟ್ ಬರೋದಕ್ಕೆ ಕೆಮಿಕಲ್ ಬಳಕೆ ಮಾಡಲಾಗಿದ್ದು ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಮಾಂಸಾಹಾರ ಸೇವನೆ ಮಾಡದವರು ಹೆಚ್ಚು ಪನ್ನೀರನ್ನು ಸೇವನೆ ಮಾಡುತ್ತಾರೆ. ಯಾಕೆಂದರೆ ಕೊಬ್ಬಿನ ಪ್ರಮಾಣ ಪನ್ನೀರ್ನಲ್ಲಿ ಹೆಚ್ಚಾಗಿರುತ್ತದೆ. ಆದರೆ ತಯಾರಕರು ಪನ್ನೀರ್ ತಯಾರಿಸುವ ವೇಳೆ ಅದನ್ನು ಮೃದುವಾಗಿಸಲು ಕೆಮಿಕಲ್ ಬಳಕೆ ಮಾಡುವುದರಿಂದ ಪನ್ನೀರ್ನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೋಟೀನ್ ಅಂಶ ಕಡಿಮೆಯಾಗುತ್ತದೆ. ಹಾಗಾಗಿ ನೀವು ಬಳಸುವ ಪನ್ನೀರ್ ಯಾವುದು? ಯಾವ ಕಂಪನಿಯದ್ದು ಎಂದು ಗೊತ್ತು ಮಾಡಿಕೊಳ್ಳುವುದು ಅತ್ಯಗತ್ಯ. ಯಾವ ಪನ್ನೀರ್ ಸೇವನೆಗೆ ಯೋಗ್ಯ? ಹಾಗಾದರೆ ಎಲ್ಲದರಲ್ಲೂ ಕೆಮಿಕಲ್ ಬಳಕೆ ಆಗುತ್ತಾ? ಕೆಮಿಕಲ್ ಬಳಕೆ ಮಾಡದ ಪನ್ನೀರ್ ಕಂಡು ಹಿಡಿಯುವುದು ಹೇಗೆ? ಯಾವುದನ್ನು ಬಳಕೆ ಮಾಡಬೇಕು? ಯಾವುದನ್ನು ಬಳಕೆ ಮಾಡಬಾರದು? ಎಂದು ತಿಳಿಯುವುದು ತುಂಬಾ ಕಷ್ಟ. ಆದರೆ ಆಹಾರ ಇಲಾಖೆ ಈ ಸಮಸ್ಯೆಗೆ ಪರಿಹಾರವನ್ನು ನೀಡಿದೆ.
ಇದಕ್ಕಾಗಿ ಆಹಾರ ಇಲಾಖೆ ಟೆಸ್ಟ್ ಕಿಟ್ ಅನ್ನು ವಿತರಣೆ ಮಾಡುತ್ತದೆ. ಅದರಲ್ಲಿ ಪನ್ನೀರ್ ನಲ್ಲಿ ಎಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ, ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಇದೆ ಅನ್ನೋದನ್ನು ಪತ್ತೆ ಹಚ್ಚಬಹುದು. ಜೊತೆಗೆ ಇದು ಸೇವನೆಗೆ ಯೋಗ್ಯನಾ ಇಲ್ವಾ ಅನ್ನೋದು ಕೂಡ ಗೊತ್ತಾಗಲಿದೆ. ಈ ಸಾಧನವನ್ನು ಆಹಾರ ಇಲಾಖೆಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಆಹಾರ ಇಲಾಖೆ ಫುಡ್ ಬ್ರ್ಯಾಂಡ್ಗಳ ಹಲವು ಬಗೆಯ ಪನ್ನೀರ್ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಆ ಟೆಸ್ಟ್ಗೆ ಒಳಪಡಿಸಿದ ಸಂದರ್ಭದಲ್ಲಿ ಕ್ಯಾಲ್ಶಿಯಂ ಮತ್ತು ಪ್ರೋಟೀನ್ ಒಂದು ಪ್ರಮಾಣದಲ್ಲಿ ಇರಬೇಕು ಎಂದು ಹೇಳಲಾಗುತ್ತದೆ. ಆದರೆ ಆ ಪ್ರಮಾಣಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ. ಪನ್ನೀರ್ ಮೃದುವಾಗಿ ಇರಲು ಕೆಮಿಕಲ್ ಬಳಕೆ ಮಾಡಿರುವುದು ಲ್ಯಾಬ್ನಲ್ಲಿ ಪತ್ತೆಯಾಗಿದೆ. ಹೀಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಶಿಯಂ, ಪ್ರೋಟೀನ್ ನಿಂದ ಪನ್ನೀರ್ ತಯಾರಿಸುವ ಕಂಪನಿಗಳಿಗೆ ನೋಟೀಸ್ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ. ಇಂತಹ ಪನ್ನೀರ್ ಸೇವನೆ ಮಾಡುವುದರಿಂದ ಹಲವಾರು ಸಮಸ್ಯೆಗಳು ಬರಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ರೀತಿಯ ಪನ್ನೀರ್ ಅನ್ನು ಜನ ಹೆಚ್ಚಾಗಿ ಸೇವನೆ ಮಾಡಿದರೆ ನಾನಾ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಅಸುರಕ್ಷಿತ ಪನ್ನೀರ್ ತಯಾರಿಸುವ ಕಂಪನಿಗಳಿಗೆ ಆಹಾರ ಇಲಾಖೆ ನೋಟೀಸ್ ನೀಡಲು ನಿರ್ಧರಿಸಿದೆ.