ಬೆಂಗಳೂರು: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಕಳೆಯುವ ಸಮಯ ಕಡಿತವಾಗಲಿದೆ. ಇದರಿಂದಾಗಿ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಸಮಯ ಕಡಿತಗೊಳಿಸಲು ಬಿಐಎಎಲ್ ಕೈಗೊಂಡಿರುವ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರವೇ ಲೋಕಾರ್ಪಣೆಯಾಗಲಿದೆ.
ಹೆಚ್ಚಿನ ಟ್ಯಾಕ್ಸಿಂಗ್ ಟೈಂ ಕಾರಣದಿಂದಾಗಿ ವಿಮಾನಗಳು ಸಹ ಹೆಚ್ಚು ಹೊತ್ತು ಟೇಕಾಫ್ ಆಗಲು ಕಾಯಬೇಕಾಗಿದೆ. ಅಲ್ಲದೇ ವಿಮಾನಯಾನ ಕಂಪನಿಗಳು ಟರ್ಮಿನಲ್ನಿಂದ ವಿಮಾನದ ತನಕ ಪ್ರಯಾಣಿಕರನ್ನು ಕರೆದುಕೊಂಡು ಬರಲು ಟ್ಯಾಕ್ಸಿಗೆ ಹೆಚ್ಚಿನ ಇಂಧನವನ್ನು ಹಾಕಿಸಬೇಕಿದ್ದು ನಷ್ಟ ಉಂಟಾಗುತ್ತಿದೆ.
ಬಿಐಎಎಲ್ ಕಾಮಗಾರಿ: ಬಿಐಎಎಲ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತದೆ. ವಿಮಾನ ನಿಲ್ದಾಣದ ಟ್ಯಾಕ್ಸಿಂಗ್ ಟೈಂ ಕಡಿಮೆ ಮಾಡಲು ಟ್ಯಾಕ್ಸಿ ವೇ ನಿರ್ಮಾಣ ಮಾಡುತ್ತಿದೆ. ಎರಡು ರನ್ ವೇಗಳನ್ನು ಇದು ಸಂಪರ್ಕಿಸುತ್ತದೆ. ಈ ಕಾಮಗಾರಿ 2026ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಟರ್ಮಿನಲ್ 1 ಮತ್ತು ಟರ್ಮಿನಲ್ 2 ರಿಂದ ಟ್ಯಾಕ್ಸಿಂಗ್ ಟೈಂ ಪಾರ್ಕಿಂಗ್ ಜಾಗ, ರನ್ ವೇ ಬಳಕೆ ಮೇಲೆ ಆಧಾರಿತವಾಗಿದೆ. ಸದ್ಯ ವಿಮಾನ ನಿಲ್ದಾಣದಲ್ಲಿ ಎರಡು ರನ್ ವೇಗಳಿದ್ದು, ಒಂದನ್ನು ಆಗಮನ ಮತ್ತೊಂದನ್ನು ನಿರ್ಗಮನಕ್ಕಾಗಿ ಬಳಕೆ ಮಾಡಲಾಗುತ್ತಿದೆ.
ಟರ್ಮಿನಲ್-1 ಸದ್ಯ ಪ್ರತಿನಿತ್ಯ 480 ಏರ್ ಟ್ರಾಫಿಕ್ ಮೂಮೆಂಟ್ ಮತ್ತು ಟರ್ಮಿನಲ್-2 280 ಏರ್ ಟ್ರಾಫಿಕ್ ಮೂಮೆಂಟ್ ನಿರ್ವಹಣೆ ಮಾಡುತ್ತದೆ. ಅಂದಾಜು ಟ್ಯಾಕ್ಸಿಂಗ್ ಟೈಂ ಸದ್ಯ 10-12 ನಿಮಿಷವಿದೆ. ದಕ್ಷಿಣ ರನ್ ವೇ ಬಳಕೆ ಮಾಡುವ ಟರ್ಮಿನಲ್-1ನಲ್ಲಿ ಇದು 20 ನಿಮಿಷ ತೆಗೆದುಕೊಳ್ಳುತ್ತಿದೆ. ರನ್ ವೇಯನ್ನು ಒಟ್ಟಾಗಿ ನಿರ್ವಹಣೆ ಮಾಡುವ ಮಾದರಿಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ವಿಮಾನಕ್ಕೆ ಯಾವ ರನ್ ವೇ ಹತ್ತಿರವಾಗಿದೆಯೋ ಅದನ್ನು ನಿಗದಿಗೊಳಿಸಲಾಗುತ್ತದೆ. ಆಗ ಟರ್ಮಿನಲ್ ಮತ್ತು ರನ್ ವೇ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಉತ್ತರ ರನ್ ವೇನಲ್ಲಿ ಐಎಲ್ಎಸ್ ಕಾಮಗಾರಿ ಪೂರ್ಣಗೊಂಡಿದೆ. ದಕ್ಷಿಣ ರನ್ ವೇಯಲ್ಲಿ ಈ ಕಾಮಗಾರಿ 2025ರ ಏಪ್ರಿಲ್ನಲ್ಲಿ ಪೂರ್ಣವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿಯಿಂದಾಗಿ ರನ್ ವೇಯಲ್ಲಿ ಹವಾಮಾನ ವೈಫರಿತ್ಯದ ಸಮಯದಲ್ಲಿಯೂ ಸುಲಭವಾಗಿ ವಿಮಾನ ಲ್ಯಾಂಡ್ ಮಾಡಲು ಸಹಕಾರಿಯಾಗಲಿದೆ.
ಎರಡು ರನ್ ವೇನಲ್ಲಿ ಆಗಮನ/ ನಿರ್ಗಮನಕ್ಕೆ ಅವಕಾಶ ನೀಡಲು ಎಎಐ ಜೊತೆ ಮಾತುಕತೆ ನಡೆಸಬೇಕು. ಅಲ್ಲದೇ ಯಲಹಂಕ ವಾಯುನೆಲೆ/ ಹೆಚ್ಎಎಲ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ವಾಯುಯಾನ ಪ್ರದೇಶದ ಮರು ಹಂಚಿಕೆಯಾಗಿ ಎಎಐ ಹೊಸ ಮಾರ್ಗಸೂಚಿಯನ್ನು ಪಕ್ರಟಬೇಕಿದೆ.