ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ನಾಯಕರು ಕೂಡ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ಸವಾಲನ್ನು ಹಾಕಿದ್ದಾರೆ.
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಂದು ಇಲಾಖೆಗಳಲ್ಲಿಯೂ ಬೆಲೆ ಏರಿಕೆ ಸಾಮಾನ್ಯವಾಗಿದೆ. ಬಿಎಂಟಿಸಿ ಪ್ರಯಾಣ ದರ, ವಿದ್ಯುತ್ ಬಿಲ್, ಆಸ್ತಿ ತೆರಿಗೆ, ಅಬಕಾರಿ ಸುಂಕ ಹೀಗೆ ಪ್ರತಿಯೊಂದರ ಬೆಲೆ ಏರಿಕೆಯಾಗಿದೆ ಎಂದು ದೂರಿದ್ದಾರೆ. ಪ್ರಸ್ತುತ ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಕುರಿತು ದರ ನಿಗದಿ ಸಮಿತಿ ರಚಿಸಲು ಮತ್ತು ಇದರ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಿಎಂಆರ್ಸಿಎಲ್ಗೆ ರಾಜ್ಯ ಸರ್ಕಾರ ಸಲಹೆ ನೀಡಿದ್ದು, ಸಮಿತಿಯಲ್ಲಿನ ರಾಜ್ಯ ಪ್ರತಿನಿಧಿಗಳ ಪ್ರಯಾಣದ ದರ ಏರಿಕೆಯ ಒತ್ತಾಯದ ಮೇರೆಗೆ ಪರಿಷ್ಕೃತ ದರದ ವರದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತೇಜಸ್ವಿ ಸೂರ್ಯ ದೂರಿದ್ದಾರೆ.
ಪ್ರಯಾಣದ ದರ ಏರಿಕೆಯಿಂದ ಬೆಂಗಳೂರಿನ ಜನತೆಗೆ ಉಂಟಾಗುವ ತೊಂದರೆಗಳ ಅರಿತು ಬಿಜೆಪಿ ದರ ಏರಿಕೆಯನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಪರಿಷ್ಕೃತ ದರಗಳ ಏರಿಕೆಯನ್ನು ಮರು ಪರಿಶೀಲಿಸಿ ನ್ಯಾಯಸಮ್ಮತ ದರ ನಿಗದಿಪಡಿಸಲು ನೆರವಾಗಬೇಕು. ಬೆಂಗಳೂರಿನ ಸಂಸದರು ಹಾಗೂ ದರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಬೆಂಗಳೂರಿನ ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ತಮಗೆ ಸಲಹೆ ಮತ್ತು ಸಹಕಾರ ನೀಡಲು ಸಿದ್ದರಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಕಾರಣವೇನು?: ಮೆಟ್ರೋ ಏರಿಕೆ ಬಗ್ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದರು. ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಜತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದೆ. ಇದರಲ್ಲಿ ಎರಡೂ ಸರ್ಕಾರಗಳ ಸಮ ಪಾಲುದಾರಿಕೆ ಇದೆ ಎಂದಿದ್ದರು. ಇದೊಂದು ಸ್ವಾಯತ್ತ ಸಂಸ್ಥೆ, ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದಿದ್ದರು.
2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್ಸಿಎಲ್ ನಮಗೆ ಪತ್ರ ಬರೆಯುತ್ತಿತ್ತು. ಮೆಟ್ರೊ ದರ ಪರಿಷ್ಕರಣೆ ಸಮಿತಿ ದೇಶದ ಉಳಿದ ಮೆಟ್ರೋ ರೈಲಿನ ಪ್ರಯಾಣದರವನ್ನು ಅಧ್ಯಯನ ಮಾಡಿದೆ. ಸದ್ಯ ಬೆಂಗಳೂರು ಮೆಟ್ರೋ ಪ್ರಯಾಣ ದರ ಕನಿಷ್ಠ 10 ರೂಪಾಯಿ ಹಾಗೂ ಗರಿಷ್ಠ 60 ರೂಪಾಯಿ ಆಗಿದೆ ಎಂದು ವಿವರಿಸಿದ್ದರು.
ದೆಹಲಿ ಮೆಟ್ರೋವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣ ದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಆದರೆ ಈಗ ಪ್ರಯಾಣ ದರವನ್ನು ಕೇಂದ್ರ ಬಿಜೆಪಿ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ. ಮೆಟ್ರೋ ರೈಲ್ವೆ ಕಾಯಿದೆಯ ಸೆಕ್ಷನ್ 37ರ
ಪ್ರಕಾರ ಪ್ರಯಾಣ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಮೆಟ್ರೋ ರೈಲು ನಿಗಮಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಅದೇ ಪ್ರಕ್ರಿಯೆ ಈಗ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದರು.