ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೀಗ ಇನ್ನೊಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದ್ದು. ಅವರ ವಿಡಿಯೋವೊಂದು ಭಾರೀ ಸಂಚಲನ ಮೂಡಿಸುತ್ತಿದೆ. ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಡಿ.ಕೆ ಶಿವಕುಮಾರ್ ಅವರು ಅನುದಾನದ ವಿಚಾರವಾಗಿ ಮಾತನಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಚರ್ಚೆಗಳ ನಡುವೆಯೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಡಿ.ಕೆ ಶಿವಕುಮಾರ್ ಅವರು ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಂತೆಯೇ ಭಾರೀ ಚರ್ಚೆಗಳು ನಡೆದಿವೆ. ಇದರ ನಡುವೆ ಡಿ.ಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ವಿಡಿಯೋ ವೈರಲ್ ಆಗುತ್ತಿದೆ.
ಹೌದು ಕಳೆದ ಮೂರು ದಿನಗಳಿಂದಲೂ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ಬಿಡಲಿದ್ದಾರೆ ಎನ್ನುವ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಅಲ್ಲದೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಡಿ.ಕೆ ಶಿವಕುಮಾರ್ ಅವರು ಮಹಾರಾಷ್ಟ್ರದ ಏಕನಾಥ್ ಶಿಂಧೆ ಅವರಂತೆ ಆಗಲಿದ್ದಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದಿಂದ ಹೊರ ಬಂದ ಏಕನಾಥ್ ಶಿಂಧೆ ಅವರು ಇದೀಗ ಮಹಾರಾಷ್ಟ್ರದ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಅಲ್ಲದೆ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಅವರು ಈ ಬಾರಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇದೇ ರೀತಿ ಡಿ.ಕೆ ಶಿವಕುಮಾರ್ ಅವರು ಸಹ ಆಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ – ತೇಜಸ್ವಿ ಸೂರ್ಯ ವಿಡಿಯೋ ವೈರಲ್: ಇನ್ನು ಇದೀಗ ಸಂಸದ ತೇಜಸ್ವಿ ಸೂರ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಡಿ.ಕೆ ಶಿವಕುಮಾರ್ ಅವರು ತೇಜಸ್ವಿ ಸೂರ್ಯ ಅವರ ಮುಂದೆ ಅನುದಾನ ಬೇಕಾದರೆ, ನನ್ನ ಮುಂದೆ ತಗ್ಗಿಬಗ್ಗಿ ನಡೆಯಬೇಕು. ನನ್ನತ್ತಿರ ಸ್ವಲ್ಪ ತಗ್ಗಿಬಗ್ಗಿ ಇರಬೇಕು. ನಾನು ಬಂದ ಮೇಲೆ ಬೆಂಗಳೂರು ಅಧೋಗತಿ ಆಗೋಯ್ತು ಎಂದು ಸ್ಟೇಟ್ಮೆಂಟ್ ಮಾಡಿದ್ದ ಎಂದು ಹೇಳಿದ್ದಾರೆ.
ಈ ಸಮಯದಲ್ಲಿ ತೇಜಸ್ವಿ ಸೂರ್ಯ ಅವರು ಡಿ.ಕೆ ಶಿವಕುಮಾರ್ ಅವರನ್ನು ಮನವೊಲಿಸುವ ರೀತಿ ಮಾತನಾಡುತ್ತಿದ್ದಾರೆ. ಮೆಟ್ರೋದಲ್ಲಿ ಸಂಚರಿಸುವಾಗ ಈ ವಿಡಿಯೋ ವೈರಲ್ ಆಗಿದೆ. ಇಬ್ಬರು ಅಕ್ಕಪಕ್ಕ ಕುಳಿತಿದ್ದು, ಅನುದಾನದ ವಿಚಾರವಾಗಿ ಮಾತನಾಡಿದ್ದಾರೆ. ಇನ್ನು ಅನುದಾನದ ವಿಚಾರವಾಗಿ ಜಯನಗರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಅವರನ್ನು ಉದ್ದೇಶಿಸಿ ಡಿ.ಕೆ ಶಿವಕುಮಾರ್ ಅವರು ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋ ಹಳೆಯದಾಗಿದ್ದು, ಈಗ ಅವರು ಬಿಜೆಪಿ ಸೇರುವ ಚರ್ಚೆ ನಡೆದಿರುವಾಗಲೇ ವೈರಲ್ ಆಗಿರುವುದು ಸಹ ಚರ್ಚೆಗೆ ಕಾರಣವಾಗಿದೆ. ಅನುದಾನ ಜನರ ದುಡ್ಡು: ಇನ್ನು ಈ ಅನುದಾನ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನುದಾನ ರಾಜ್ಯದ ಜನರ ತೆರಿಗೆಯ ದುಡ್ಡಾಗಿದೆ ಎಂದು ಹೇಳಲಾಗಿದೆ.