ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಾದ್ಯವೊಂದನ್ನು ಮೆಚ್ಚಿಕೊಂಡು ಬಾಯಿ ಚಪ್ಪರಿಸಿದ್ದಾರೆ. ಅಲ್ಲದೆ ಆ ಖಾದ್ಯ ಇಷ್ಟವಾಗಿ ರೆಸಿಪಿಯನ್ನು ಮನೆಯಲ್ಲಿ ಸವಿಯುವ ಆಸೆಯನ್ನೂ ಬಿಚ್ಚಿಟ್ಟಿದ್ದಾರೆ. ರಾಜಕೀಯ ಒತ್ತಡದ ನಡುವೆ ಬಿಡುವು ಮಾಡಿಕೊಂಡು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಅವರೆ ಬೇಳೆ ಮೇಳಕ್ಕೆ ಭೇಟಿ ನೀಡಿ ರುಚಿರುಚಿಯಾದ ಖಾದ್ಯಗಳ ರುಚಿ ನೋಡಿದ್ದಾರೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅವರೆ ಬೇಳೆ ಮೇಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಅವರೆ ಬೇಳೆಯಿಂದ ತಯಾರಿಸಿದ್ದ ತರಹೇವಾರಿ ಖಾದ್ಯಗಳಿಗೆ ಮನಸೋತಿದ್ದಾರೆ. ಬಾಯಿ ಚಪ್ಪರಿಸುವ ವಿವಿಧ ಖಾದ್ಯಗಳನ್ನು ಸವಿದು ವಾವ್ ಎಂದಿದ್ದಾರೆ.
ವ್ಯಕ್ತಿ, ಸ್ಥಳ, ವಿಷಯ ಎಲ್ಲವನ್ನೂ ಮನುಷ್ಯ ಮರೆಯಬಹುದು. ಆದರೆ ರುಚಿಯನ್ನು ಮರೆಯುವುದು ಅಸಾಧ್ಯ. ವಾಸವಿ ಕಾಂಡಿಮೆಂಟ್ಸ್ ಅವರು ಕೊಟ್ಟಿದ್ದ ಅವರೆ ಕುರುಕು ತಿನಿಸುಗಳನ್ನು ಕಾರಿನಲ್ಲಿಟ್ಟುಕೊಂಡಿದ್ದೆ. ಆ ರುಚಿ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎಂದು ಫಿದಾ ಆಗಿದ್ದಾರೆ.
ಮಾಗಡಿಯಲ್ಲಿ ಬೆಳೆಯುವ ಅವರೆಕಾಯಿ ತುಂಬಾ ವಿಶೇಷ. ಅದರಲ್ಲಿ ಸೊಗಡು ಜಾಸ್ತಿಯಾಗಿರುತ್ತೆ. ನನಗಂತೂ ಮಾಗಡಿ ಅವರೆ ಅಂದ್ರೆ, ಬಲು ಅಚ್ಚುಮೆಚ್ಚು. ನಮ್ಮನೆಯಲ್ಲೂ ಆಗಾಗ ಅವರೆಕಾಳು ಸಾರು, ಪಲ್ಯ ಮಾಡುತ್ತೇವೆ, ನಾನಂತೂ ಬಲು ಇಷ್ಟಪಟ್ಟು ತಿನ್ನುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಅವರೆಬೇಳೆ ಖಾದ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಅವರೆಬೇಳೆ ಮೇಳವನ್ನು ಡಿಸಿಎಂ ಸುತ್ತಾಡಿದ್ದಾರೆ. ಮೊದಲಿಗೆ ಅವರು ಅವರೆಬೇಳೆಯಿಂದ ತಯಾರಿಸಿದ ಸ್ಪೆಷಲ್ ದೋಸೆ ಸವಿದರು. ಎರಡು ಸೇರು ಅವರೆ ಬೇಳೆ, ಅವರೆಬೇಳೆಯಿಂದ ಮಾಡಿದ ಅವಲಕ್ಕಿ, ಮುರುಕು, ಅವರೆಬೇಳೆಯಿಂದ ಮಾಡಿದ ಖಾರ, ನಿಪ್ಪಟ್ಟು ಸೇರಿದಂತೆ ಹಲವು ಖಾದ್ಯಗಳನ್ನು ಅವರು ಖರೀದಿಸಿ ತೆಗೆದುಕೊಂಡು ಹೋದರು.