ಬೆಂಗಳೂರು: ಜಪಾನ್ ರಾಷ್ಟ್ರದ 15 ಸಂಸ್ಥೆಗಳು ರಾಜ್ಯದಲ್ಲಿ 7,500 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, ಈ ಮೂಲಕ ಕರ್ನಾಟಕವು ಜಪಾನ್ ಕಂಪನಿಗಳಿಗೆ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನ್ ಮೂಲಕ 15 ಸಂಸ್ಥೆಗಳು ಒಡಂಬಡಿಕೆಗೆ ಸಹಿ ಹಾಕಿವೆ. ಆಟೋಮೊಬೈಲ್ ಉತ್ಪಾದನೆ, ಕೈಗಾರಿಕಾ ಯಾಂತ್ರೀಕೃತಗೊಳಿಸುವಿಕೆ ಮತ್ತು ಸುಧಾರಿತ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಈ ಸಂಸ್ಥೆಗಳು ಮುಂದೆ ಬಂದಿವೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ರೂ. 3,748 ಕೋಟಿ ಹೂಡಿಕೆ ಮಾಡಲು ಬದ್ಧವಾಗಿದ್ದು, ನಂತರ NIDEC ಇಂಡಸ್ಟ್ರಿಯಲ್ ಆಟೊಮೇಷನ್ ಇಂಡಿಯಾ ರೂ. 600 ಕೋಟಿ ಹೂಡಿಕೆ ಮಾಡಲು ಬದ್ಧವಾಗಿದೆ. ಇದಲ್ಲದೆ, ಬೆಂಗಳೂರು ಮೂಲದ ASM ಟೆಕ್ನಾಲಜೀಸ್ ESDM ಗಾಗಿ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಲು ರೂ. 510 ಕೋಟಿ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಹೊಸ ಹೂಡಿಕೆ ಮತ್ತು ಸಹಯೋಗಗಳು ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುತ್ತವೆ. ವಿಜಯಪುರವು ಅತೀ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸಿದೆ. ಸುಜ್ಲಾನ್ 3000MW ಪವನ ಶಕ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜಯಪುರದಲ್ಲಿ ವಿಂಡ್ ಟರ್ಬೈನ್ ಬ್ಲೇಡ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಸರ್ಕಾರದೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ. ಸುಜ್ಲಾನ್ ತನ್ನ ಕಾರ್ಯಕ್ಕೆ ಶೇಕಡಾ 90 ರಷ್ಟು ಜನರನ್ನು ಐಟಿಐ ಪದವೀಧರರಿಂದ ನೇಮಿಸಿಕೊಳ್ಳಲಿದ್ದು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಚಿಸಲು ಕರ್ನಾಟಕದ ತಾಂತ್ರಿಕ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಎಂದು ಸರ್ಕಾರ ತಿಳಿಸಿದೆ.