ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಜಿಮ್ ರವಿ ಅವರನ್ನು ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿಯಾಗಿದ್ದು, ನಟನ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಟನ ಬಗ್ಗೆ ಕೆಲವು ಕುತೂಹಲಕಾರಿಯಾದ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾಗರಬಾವಿಯ ಬಳಿ ಬಹುಮುಖ ಪ್ರತಿಭೆಯ ಜಿಮ್ ರವಿ ಎಂದೇ ಖ್ಯಾತಿಯಾಗಿರುವ ರವಿ ಅವರ ಭೇಟಿಯಾಯಿತು. ಚಲನಚಿತ್ರರಂಗದ ಅನೇಕರಿಗೆ ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಹಿಸಿರುವ ಇವರು ಇನ್ಕಮ್ ಟ್ಯಾಕ್ಸ್ ಇಲಾಖೆಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದ್ದಾರೆ. ನಮ್ಮ ರಾಷ್ಟ್ರೋತ್ಥಾನ ಪರಿಷತ್ತಿನ ಸಹವಾಸವೂ ಅವರಿಗಿದೆ ಎಂದು ತಿಳಿದು ಬಂತು.
ಸುಮಾರು 20 ನಿಮಿಷಗಳ ಕಾಲ ದೂರದಿಂದಲೇ ಅವರನ್ನು ಗಮನಿಸುತ್ತಿದ್ದೆ. ಅವರ ಸುತ್ತಮುತ್ತಲಿನ ನಾಲ್ಕೈದು ಜನರನ್ನು ತನ್ನ ಮಾತಿನಿಂದ ಅವರು ಹಿಡಿದಿಟ್ಟುಕೊಂಡ ರೀತಿ ನಿಜಕ್ಕೂ ಗಮನ ಸೆಳೆಯಿತು. ನಾನೇ ಅವರನ್ನು ಸನಿಹ ಕರೆದು ಏನು ವಿಚಾರ ಎಂದು ಕೇಳಿದೆ. ಆ ಗುಂಪಿನಲ್ಲಿ ಇದ್ದ ಒಬ್ಬನ ಕುಡಿತದ ಚಟವನ್ನು ಬಿಡಿಸಲು ತಾನು ಮಾಡುತ್ತಿದ್ದ ಪ್ರಯತ್ನವನ್ನು ವಿವರಿಸಿದರು. ಬೇರೆ ಬೇರೆ ಸ್ಪರ್ಧೆಗಳಲ್ಲಿ ಇದುವರೆಗೂ ಸುಮಾರು 300 ಪದಕಗಳನ್ನು ಗೆದ್ದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು. ವಿಶೇಷವೆಂದರೆ ಅಸಹಾಯಕರಿಗೆ ಪ್ರತಿ ದಿನ ತಾನು ಉಚಿತ ಊಟ ಕೊಡುತ್ತಿರುವುದಾಗಿ ತಿಳಿಸಿದರು. ಕಳೆದ ಮೂರು ವರ್ಷಗಳಿಂದ ಪ್ರತಿದಿನ ಕನಿಷ್ಠ 300 ಜನಕ್ಕೆ ಮುದ್ದೆ ಅನ್ನ ಸಾರು ಊಟ ಕೊಡುತ್ತಾ ಬಂದಿರುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೇ, ಹೇಳಲೋ ಬೇಡವೋ ಎಂಬಂತೆ, ಬರುವ ಆಗಸ್ಟ್ನಲ್ಲಿ 101 ಜನರನ್ನು ಉಚಿತವಾಗಿ ವಾರಣಾಸಿಗೆ ಕರೆದುಕೊಂಡು ಹೋಗಿ ವಿಶ್ವನಾಥನ ದರ್ಶನ ಮಾಡಿಸಿ ವಾಪಸ್ಸು ಕರೆದುಕೊಂಡು ಬರುವುದಾಗಿ ಸಂತಸದಿಂದ ಹೇಳಿದರು.

ನಟನ ಮಾತು ಕೇಳಿ ಖುಷಿಯಾದ ಮಾಜಿ ಸಚಿವ ಸುರೇಶ್ ಕುಮಾರ್ ನಿಮ್ಮ ತಂಡ ವಾರಣಾಸಿಗೆ ಹೋಗುವ ದಿನ ನನಗೆ ತಿಳಿಸಿ ನಾನು ಬಂದು ನಿಮ್ಮನ್ನು ಬೀಳ್ಕೊಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಜಿಮ್ ರವಿ ಅವರ ಬಗ್ಗೆ ಮಾತು ಮುಂದುವರಿಸಿದ ಅವರು, ಚಲನಚಿತ್ರ ಕ್ಷೇತ್ರದಲ್ಲಿಯೂ ಇವರು ಸಾಕಷ್ಟು ಹೆಸರು, ಜನಪ್ರಿಯತೆ ಪಡೆದಿದ್ದಾರೆ. ಅಲ್ಲೇ ಇದ್ದ ಒಂದು ಬಸ್ ಸ್ಟಾಪ್ಗೆ ಜಿಮ್ ರವಿ ಬಸ್ ಸ್ಟಾಪ್ ಕರೆಯುತ್ತಾರೆ ಎಂಬುದು ತಿಳಿದು ಬಂತು. ನಿಮ್ಮ ವಯಸ್ಸು ಎಷ್ಟು ಅಂತ ಕೇಳಿದೆ. ಅದಕ್ಕೆ ಅವರು ಸರ್ ನನ್ನ ವಯಸ್ಸು 38ಕ್ಕೆ ನಿಂತು ಹೋಗಿದೆ. ಅದು ಯಾವುದೇ ಕಾರಣಕ್ಕೂ ಏರಿಕೆ ಆಗಬಾರದು ಎಂದು ನಿಶ್ಚಯಿಸಿದ್ದೇನೆ ಎಂದು ಹಾಸ್ಯವಾಗಿ ಆದರೆ ಉಲ್ಲಾಸದಿಂದ ಅವರು ಹೇಳಿದ ಪರಿ ನನ್ನ ಮನಸ್ಸಿಗೆ ಬಹಳ ಹಿಡಿಸಿತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.