ದೇವನಹಳ್ಳಿ : ಸ್ವಚ್ಛ ಪರಿಸರ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಟ್ಸಾಕ್ಸಿ ಸೇವೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.
ಟ್ಸಾಕ್ಸಿ ಸೇವೆಯು ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಲಭ್ಯವಿದ್ದು, ಸಾಮಾನ್ಯ ದರವನ್ನು 699 ರೂ.ಗೆ ನಿಗದಿ ಮಾಡಿರುವುದಾಗಿ ರಿಫೆಕ್ಸ್ ಇವೀಲ್ಜ್ ಕಂಪನಿ ತಿಳಿಸಿದೆ. ಎಲೆಕ್ಟ್ರಿಕ್ ಟ್ಯಾಕ್ಸಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ, ಬೆಂಗಳೂರಿನ ಸ್ವಚ್ಛ ಪರಿಸರ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪರಿಚಯಿಸುತ್ತಿರುವುದು ಸಂತಸದ ವಿಷಯ. ಏರ್ಪೋರ್ಟ್ ಪ್ರಯಾಣಿಕರ ಅನುಕೂಲಕ್ಕಾಗಿ ರಿಫೆಕ್ಸ್ ಇವೀಲ್ಜ್ ಗ್ರೂಪ್ ಎಲೆಕ್ಟ್ರಿಕ್ ಟ್ಯಾಕ್ಸಿಗಳ ಸೇವೆ ನೀಡುತ್ತಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ಸಿಟಿಗೆ ಲಭ್ಯವಿರುವ ಟ್ಯಾಕ್ಸಿಗಳ ಸಾಮಾನ್ಯ ದರ 699 ರೂ. ನಿಗದಿ ಮಾಡಿರುವುದು ವಿಶೇಷವಾಗಿದೆ ಎಂದರು.
ಸದ್ಯ 400 ಎಲೆಕ್ಟ್ರಿಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ 600 ಟ್ಯಾಕ್ಸಿಗಳನ್ನು ಸೇರ್ಪಡೆ ಮಾಡುವುದಾಗಿ ಕಂಪನಿಯವರು ಹೇಳಿದ್ದಾರೆ. ಟ್ಯಾಕ್ಸಿ ಸೇವೆಯಲ್ಲೂ ಸ್ವರ್ಧೆ ಇದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಕಾರಿಯಾಗಿದೆ. ಈಗಾಗಲೇ ಪಿಂಕ್ ಟ್ಯಾಕ್ಸಿ ಸೇವೆ ಸಹ ಕಾರ್ಯ ನಿರ್ವಹಿಸುತ್ತಿದೆ.