ಬೆಂಗಳೂರು: ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ತುಮಕೂರಿಗೆ ಭಾರೀ ಹಿನ್ನಡೆಯಾಗಿದೆ. ತುಮಕೂರಿನಲ್ಲಿ ಬೆಂಗಳೂರು / ರಾಜ್ಯದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸೇರಿದಂತೆ ಹಲವರು ಒತ್ತಾಯಿಸಿದ್ದರು. ಆದರೆ, ಕೊನೆಗೂ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವಂತೆ ಕಾಣಿಸುತ್ತಿಲ್ಲ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಫೆಬ್ರವರಿ 4ರಂದು ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ. ಅದರಲ್ಲಿ ತುಮಕೂರು ಹಾಗೂ ನೆಲಮಂಗಲದ ಮುಖ್ಯ ಭಾಗದಲ್ಲೂ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗುವ ಸಾಧ್ಯತೆ ಇಲ್ಲ. ತುಮಕೂರಿನ ಭಾಗಕ್ಕೆ ವಿಮಾನ ನಿಲ್ದಾಣ ಕೈ ತಪ್ಪಿದ್ದು ಹೇಗೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆಯಾಗಿದೆ. ರಾಜ್ಯಸಭೆಯಲ್ಲಿ ತಮಿಳುನಾಡಿನ ಸಂಸದರು ಈ ಬಗ್ಗೆ ಜೋರು ದನಿಯಲ್ಲಿ ಚರ್ಚೆ ಮಾಡಿದ ಮೇಲೆ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಸಂಸದರಾದ ಎಚ್.ಡಿ ದೇವೇಗೌಡ ಅವರು ಗುಡುಗಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಳವಾಗುತ್ತಿದ್ದು. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಮಿಳುನಾಡು ಸಂಸದರು ಮನವಿ ಮಾಡಿದ್ದರು. ಈ ಬೆಳವಣಿಗೆಳ ನಂತರ ಕೊನೆಗೂ ರಾಜ್ಯ ಸರ್ಕಾರ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ನಿಗದಿ ಮಾಡಿದೆ.
ಅಂದರೆ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ಮಾಡಲಿದ್ದಾರೆ. ಆದರೆ ಮೂರು ಜಾಗಗಳನ್ನು ಗುರುತಿಸುವಲ್ಲಿ ಅಥವಾ ಶಾರ್ಟ್ ಲಿಸ್ಟ್ ಮಾಡುವಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ಪ್ರಭಾವ ಹೆಚ್ಚಾಗಿರುವುದು ದಟ್ಟವಾಗಿ ಕಾಣಿಸುತ್ತಿದೆ. Also Read
ತುಮಕೂರಿಗೆ ಕೈತಪ್ಪಿದ ಅವಕಾಶ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲೇ ನಿರ್ಮಾಣ ಮಾಡಬೇಕು. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ರಾಜ್ಯದ 22 ಜಿಲ್ಲೆಗಳಿಗೆ ಅನುಕೂಲವಾಗಿದೆ. ಅಲ್ಲದೆ ತುಮಕೂರು ಹಾಗೂ ತುಮಕೂರಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಭಾರೀ ಸಹಕಾರಿಯಾಗಲಿದೆ. ಬೆಂಗಳೂರಿನ ನಂತರ ಎರಡನೇ ಕೇಂದ್ರವಾಗಿ ತುಮಕೂರು ಅಭಿವೃದ್ಧಿ ಆಗಲಿದೆ ಎಂದು ಚರ್ಚೆ ನಡೆದಿತ್ತು. ವಿಶೇಷವೆಂದರೆ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ನಿರ್ಮಾಣ ಮಾಡಬೇಕು ಎಂದು ಪಕ್ಷಾತೀತ ಬೆಂಬಲ ವ್ಯಕ್ತವಾಗಿತ್ತು. ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕೇಂದ್ರ ಹಾಗೂ ರಾಜ್ಯ ಸಚಿವರು ಮತ್ತು ಶಾಸಕರು ಸೇರಿದಂತೆ ಹಲವರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದರು.
ಈ ರೀತಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾದರೂ ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗುವ ಕನಸು ಈಡೇರುತ್ತಿಲ್ಲ. ಇಲ್ಲೂ ಸಹ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಮೇಲುಗೈ ಸಾಧಿಸಿದ್ದಾರೆ. ಶಾರ್ಟ್ಲಿಸ್ಟ್ ಆಗಿರುವ ಪ್ರದೇಶಗಳು: ಇನ್ನು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಬಿಡಿದಿ, ಹಾರೋಹಳ್ಳಿ ಹಾಗೂ ಸೋಲೂರು ಜಾಗಗಳನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇದು ಅಂತಿಮವಲ್ಲ ಮುಂದಿನ ದಿನಗಳಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಆದರೆ, ತುಮಕೂರಿಗೆ ಕೈ ತಪ್ಪುವುದು ಖಚಿತ ಅಂತಲೇ ಹೇಳಲಾಗುತ್ತಿದೆ.