ಬೆಂಗಳೂರು: ಮದುವೆ ಎಂಬುದು ಇತ್ತೀಚಿನ ದಿನಗಳಲ್ಲಿ ಗಂಡು ಹೆಣ್ಣಿನ ಮಧ್ಯೆ ಹೊಸ ಬುದುಕಿಗೆ ನಾಂದಿ ಹಾಡುವ ಬದಲಾಗಿ ಅದೆಷ್ಟೋ ಅಕ್ರಮ, ಅನಾಚಾರಗಳಿಗೆ, ದುಡ್ಡು ಮಾಡಲು ಕಾರಣವಾಗುತ್ತಿದೆ. ಕೆಲವರಂತೂ ಮದುವೆ ಹೆಸರಿನಲ್ಲಿ ಹಣ ಲಪಟಾಯಿಸುವ ದಂಧೆ ಶುರು ಮಾಡಿಕೊಂಡಿದ್ದನ್ನು ನೀವು ಕೇಳಿರುತ್ತೀರಿ. ಇದೀಗ ಮ್ಯಾಟ್ರಿಮೋನಿ ಬಳಕೆದಾರರೊಬ್ಬರು ಬಾಳಸಂಗಾತಿಯನ್ನು ಹುಡುಕಿದ್ದು, ಬಳಿಕ ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆದ್ದರಿಂದ ಮ್ಯಾಟ್ರಿಮೋನಿ ಆಪ್, ಜಾಲತಾಣ ಬಳಕೆ ಮಾಡುವವರು ಜಾಗರೂಕರಾಗಬೇಕಿದೆ.
ಇದೇ ಮ್ಯಾಟ್ರಿಮೋನಿ ಮೂಲಕ ಬಾಳ ಸಂಗಾತಿಯನ್ನು ಹುಡುಕಿ ಮೊಬೈಲ್ ಸಂಪರ್ಕ ಸಾಧಿಸಿದ್ದ ವ್ಯಕ್ತಿಯೊಬ್ಬರು ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮದುವೆ ವಿಚಾರಕ್ಕೆ ಪರಿಚಿತಳಾದ ಯುವತಿ ಕೆಪಿಟಿಸಿಎಲ್ ಇಂಜಿನಿಯರ್ ಷೇರು ಮಾರುಕಟ್ಟೆ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಆ ಇಂಜಿನಿಯರ್ ಸುಮಾರು ಐದು ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಬುದಕಿಗೆ ಬಾಳ ಸಂಗಾತಿಯಾಗಿ ಬರುತ್ತಾಳೆ ಎಂದು ಕನಸು ಕಂಡಿದ್ದ ಇಂಜಿನಿಯರ್ಗೆ ಆಕೆಯೊಬ್ಬ ವಂಚಕಿ ಎಂಬುದು ಗೊತ್ತಾಗುತ್ತಿದ್ದಂತೆ ಪ್ರಕರಣ ಕುರಿತು ಕೇಂದ್ರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ. ಪ್ರಕರಣದ ಹಿನ್ನೆಲೆ ಏನು? ಬಾಳಸಂಗಾತಿಯನ್ನು ಮ್ಯಾಟ್ರಿಮೋನಿಯಲ್ಲಿ ಹುಡುಕಲು ಐದು ವರ್ಷಗಳ ಹಿಂದೆ ಈ ಕೆಪಿಟಿಸಿಎಲ್ ಇಂಜಿನಿಯರ್ ನೋಂದಣಿಯಾಗಿದ್ದಾರೆ. ಅಲ್ಲಿಂದ ಯುವತಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಪರಿಚಿತಳಾದವಳೇ ಈ ವಂಚಕಿ. 2024ರ ಅಕ್ಟೋಬರ್ನಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ಗೆ ಯುವತಿ ಪರಿಚಿತವಾಗುತ್ತಾಳೆ. ನಂತರ ಇಬ್ಬರು ಮದುವೆ ವಿಚಾರವಾಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಳ್ಳುತ್ತಾರೆ.
ಯುವತಿ ತಾನು ಯುಕೆ ಫಾಸ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. 2025ರ ಫೆಬ್ರವರಿಯಲ್ಲಿ ಭಾರತಕ್ಕೆ ಬರುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಹೀಗೆ ಕೆಲವು ವಾರಗಳ ಕಾಲ ಇಬ್ಬರ ಮಧ್ಯೆ ಸಂಭಾಷಣೆ ನಡೆದಿದೆ. ತಾನೇ ಬಾಳ ಸಂಗಾತಿಯಾಗಿ ಬರುವವಳು ಎಂಬಂತೆ ಮಾತಿನಲ್ಲೇ ಮೋಡಿ ಮಾಡಿದ್ದಾಳೆ. ನಂಬಿದ ಈ ಇಂಜಿನಿಯರ್ ಗೆ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾಳೆ.
05 ಲಕ್ಷ ಹಣ ಸುಲಿದು ಫೋನ್ ಸಂಪರ್ಕ ಕಟ್ ಇದನ್ನು ನಂಬಿದ ಆ ಇಂಜಿನಿಯರ್ ನಿಂದ ಹೂಡಿಕೆ ಬಗ್ಗೆ ಸುಳ್ಳು ಹೇಳಿ ಹಂತ ಹಂತವಾಗಿ ಸುಮಾರು 05 ಲಕ್ಷ ಹಣ ಸುಲಿಗೆ ಮಾಡಿದ್ದಾಳೆ. ಯಾವಾಗ ತನಗೇ ಬೇಕಾದಷ್ಟು ಹಣ ಬಂತೋ ಆಗ ಸಂಪರ್ಕ ಕಡಿತಗೊಳಿಸಿದ್ದಾಳೆ. ಇಬ್ಬರ ಮಧ್ಯದ ಸಂಪರ್ಕ ಕಡಿತಗೊಳ್ಳುತ್ತಲೇ ತಾನು ಮೋಸ ಹೋಗಿದ್ದರ ಬಗ್ಗೆ ಇಂಜಿನಿಯರ್ ಅರಿವಿಗೆ ಬಂದಿದೆ. ನಂತರ ಹತ್ತಿರದ ಸೈಬರ್ ಠಾಣೆಗೆ ಹೋಗಿ ಘಟನೆ ಕುರಿತು ಪೊಲೀಸರಿಗೆ ಎಲ್ಲವನ್ನು ವಿವರಿಸಿದ್ದಾರೆ. ಮೊಬೈಲ್ ಸಂಖ್ಯೆ ಅಗತ್ಯ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಅಧಿಕಾರಿಗಳು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.