ಬೆಂಗಳೂರು: ”ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ” ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ”ನಮ್ಮಲ್ಲಿ ಯಾವುದೇ ಟೀಮ್ ಇಲ್ಲ. ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ದೂರು ನೀಡಿದ್ದೇನೆ ಎಂದು ಸುಳ್ಳಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಒಕ್ಕಲಿಗರು ಪ್ರತ್ಯೇಕವಾಗಿ ಸಭೆ ಮಾಡಿಲ್ಲ ಅಥವಾ ಗುರುತಿಸಿಕೊಂಡಿಲ್ಲ. ಇದು ಕೂಡ ಸುಳ್ಳು ಸುದ್ದಿ” ಎಂದರು.
‘ಕಾಂಗ್ರೆಸ್ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ 14 ಸೈಟು ವಾಪಸ್ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
‘ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ, ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ” ಎಂದು ಹೇಳಿದರು.