ಬೆಂಗಳೂರು: ಇಲ್ಲಿನ ಪಿಜಿ ಮಾಲಕಿಯೊಬ್ಬರು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ಘಟನೆ ಕೋಣನಕುಂಟೆಯಲ್ಲಿ (Konanakunte) ನಡೆದಿದೆ. ಆಸ್ತಿಯ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೋಣನಕುಂಟೆಯ ಕೊತ್ತನೂರು ನಿವಾಸಿ ಹೇಮಾವತಿ ಮೃತ ಮಹಿಳೆ.
ಕೆಲ ದಿನಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಹೇಮಾವತಿ, ಪಿಜಿಯನ್ನು ನಡೆಸುತ್ತಿದ್ದರು. ಪಿಜಿ ಹಾಗೂ ಮನೆ ಕಡೆಯೂ ಆರ್ಥಿಕವಾಗಿ ಚೆನ್ನಾಗಿದ್ದ ಹೇಮಾವತಿಗೆ ಶರವಣ ಎನ್ನುವ ವ್ಯಕ್ತಿಯ ಪರಿಚಯವಾಗಿತ್ತು. ದಿನ ಕಳೆದಂತೆ ಸಲುಗೆಯಲ್ಲಿ ಮಾತಾಡಿಸುತ್ತಿದ್ದ ಶರವಣ, ಹೇಮಾವತಿಗೆ ತುಂಬಾ ಹತ್ತಿರವಾಗಿದ್ದ.
ಈ ವೇಳೆ ಹೇಮಾವತಿ, ಶರವಣ ಬಳಿ ಸಾಲ ಪಡೆದಿದ್ದರು. ಆದರೆ ಹೇಳಿದ ಟೈಮ್ಗೆ ಹಣ ವಾಪಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮಾ.2 ರಂದು ರಾತ್ರಿ ಹೇಮಾವತಿಯನ್ನು ಹುಡುಕಿಕೊಂಡು ಶರವಣ ಮನೆ ಹತ್ತಿರ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯರಾತ್ರಿಯ ಹೊತ್ತಿಗೆ ಜಗಳ ತಣ್ಣಾಗಿದ್ದು, ಬೆಳಗ್ಗೆ ಹೇಮಾವತಿ ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೊತೆಗಿದ್ದ ಶರವಣ ನಂಗೇನು ಗೊತ್ತಿಲ್ಲ. ರಾತ್ರಿ ಏನಾಗಿದೆ ಗೊತ್ತಿಲ್ಲ ಎಂದು ಹೇಳುತ್ತಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಶರವಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ಹೇಮಾವತಿ ಕತ್ತಿನ ಭಾಗ ಸೇರಿದಂತೆ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಾಣಿಸಿದೆ. ಈ ಹಿನ್ನೆಲೆ ಪೊಲೀಸರು ಶರವಣ ಮತ್ತು ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ