ಬೆಂಗಳೂರು: ಬೆಂಗಳೂರು ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ ಮೇ ತಿಂಗಳಿನಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಆರ್. ವಿ. ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ. ಆದ್ದರಿಂದ ಈ ಮಾರ್ಗ ಸಾಫ್ಟ್ವೇರ್ ಇಂಜನಿಯರ್ಗಳಿಗೆ ಅನುಕೂಲವಾಗಲಿದೆ. ಆದರೆ ಈ ಮಾರ್ಗದಲ್ಲಿ ಓಡಿಸಲು ರೈಲುಗಳ ಕೊರತೆ ಇದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ 18 ಕಿ. ಮೀ. ಮಾರ್ಗದಲ್ಲಿ ಪ್ರತಿನಿತ್ಯ 3 ಲಕ್ಷ ಜನರು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ. ಬಿಎಂಆರ್ಸಿಎಲ್ ಈ ಮಾರ್ಗದಲ್ಲಿ ಪ್ರಸ್ತುತ ರೈಲುಗಳ ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚಾರ ನಡೆಸುಲು ಬಿಎಂಆರ್ಸಿಎಲ್ ಯೋಜನೆ ರೂಪಿಸಿದೆ. ಆದ್ದರಿಂದ ರೈಲ್ವೆ ಸುರಕ್ಷತಾ ಆಯುಕ್ತರ ಒಪ್ಪಿಗೆ ಇನ್ನೂ ಬಾಕಿ ಇದೆ.
ಈ ಮಾರ್ಗ 2021ರಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಈಗ ಕಾಮಗಾರಿ ಪೂರ್ಣಗೊಂಡರೂ ಸಹ ಸಂಚಾರ ನಡೆಸಲು ರೈಲುಗಳಿಲ್ಲ. ಏಪ್ರಿಲ್, ಮೇ ತಿಂಗಳಿನಲ್ಲಿ ಕೋಲ್ಕತ್ತಾದಿಂದ ರೈಲುಗಳು ಬರಲಿದ್ದು, ಬಳಿಕ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. 2025ರ ಜನವರಿಯಲ್ಲಿ ರೈಲು ಸಂಚಾರ ಆರಂಭಿಸುವ ಭರವಸೆಯನ್ನು ಬಿಎಂಆರ್ಸಿಎಲ್ ನೀಡಿತ್ತು. ಆದರೆ ಆ ಗಡುವು, ಮುಗಿದು ಹೋಗಿದೆ.
ಡಿ. ಕೆ. ಶಿವಕುಮಾರ್ ಭರವಸೆ: ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕೇಳಿದ್ದ ಪ್ರಶ್ನೆಗೆ ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಉತ್ತರಿಸಿದ್ದಾರೆ, “ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ಮೇ 2025ಕ್ಕೆ ಜನರ ಸಂಚಾರಕ್ಕೆ ಮುಕ್ತವಾಗಲಿದೆ” ಎಂದು ಹೇಳಿದ್ದಾರೆ. ಅಷ್ಟರ ಹೊತ್ತಿಗೆ ರೈಲುಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೂ ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್ನಲ್ಲಿ 3ನೇ ರೈಲು ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ನಾಲ್ಕು ರೈಲುಗಳು ಹಳದಿ ಮಾರ್ಗಕ್ಕಾಗಿಯೇ ನಗರಕ್ಕೆ ಆಗಮಿಸಿದೆ. ಮತ್ತೊಂದು ರೈಲು ಬಂದರೆ ಸಂಚಾರ ದಟ್ಟಣೆ ನೋಡಿಕೊಂಡು ಸಮಯದ ಆಧಾರದ ಮೇಲೆ ಬಿಎಂಆರ್ಸಿಎಲ್ ರೈಲು ಓಡಿಸಲಿದೆ. 2019ರ ಡಿಸೆಂಬರ್ನಲ್ಲಿ ಹಳದಿ ಮಾರ್ಗಕ್ಕೆ ರೈಲು ಪೂರೈಕೆ ಮಾಡಲು ಬಿಎಂಆರ್ಸಿಎಲ್ ಟೆಂಡರ್ ನೀಡಿತ್ತು. 216 ರೈಲುಗಳನ್ನು 173 ವಾರದಲ್ಲಿ ಪೂರೈಕೆ ಮಾಡಬೇಕಿತ್ತು. ಆದರೆ ಈ ಗುಡುವು ಮುಂದೆ ಹೋಗುತ್ತಲೇ ಇದ್ದು, ಭಾರತ-ಚೀನಾ ನಡುವಿನ ಬಿಕ್ಕಟ್ಟು, ಕೋವಿಡ್ ಪರಿಸ್ಥಿತಿ, ಟೆಂಡರ್ ನಿಯಮ ಎಲ್ಲವೂ ಇದಕ್ಕೆ ಕಾರಣವಾಗಿದೆ.
ಟೆಂಡರ್ ನಿಯಮದ ಪ್ರಕಾರ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಅಡಿಯಲ್ಲಿ 75 ಶೇಕಡಾ ಉತ್ಪಾದನೆಯನ್ನು ಸ್ಥಳೀಯ ತಯಾರಕರ ಮೂಲಕ ಮಾಡಬೇಕು. ಚೀನಾದ ಕಂಪನಿ ಕೋಲ್ಕತ್ತಾದ ಟಿಟಗಾರ್ನಲ್ಲಿ ಈ ರೈಲು ಬೋಗಿಯನ್ನು ತಯಾರು ಮಾಡುತ್ತಿದೆ. ಫೆಬ್ರವರಿಯಲ್ಲಿ ಟಿಟಗಾರ್ನಿಂದ ಮೊದಲ ರೈಲು ಬೆಂಗಳೂರು ನಗರಕ್ಕೆ ಆಗಮಿಸಿದೆ.