ಬೆಂಗಳೂರು: ಕರ್ನಾಟಕ ಸರ್ಕಾರ ಬೆಂಗಳೂರು ಹೊರವಲಯದಲ್ಲಿ ಸ್ವಿಫ್ಟ್ ಸಿಟಿ ಯೋಜನೆ ಘೋಷಣೆ ಮಾಡಿದೆ. ಸರ್ಜಾಪುರದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆ ಕರ್ನಾಟಕದ ಮೂರನೇ ಇಂಡಸ್ಟ್ರಿಯಲ್ ಹಬ್ ಆಗಲಿದೆ. ಈ ಯೋಜನೆ ಭೂ ಸ್ವಾಧೀನದ ವಿಚಾರದಲ್ಲಿ ಈಗ ರೈತರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ಹೊರ ರಾಜ್ಯದ ರಿಯಲ್ ಎಸ್ಟೇಟ್ ಮಾಫಿಯಾದ ಕುರಿತು ಪತ್ರವನ್ನು ಬರೆದಿದ್ದಾರೆ.
ಹಲವಾರು ರೈತರು ಸಹಿ ಮಾಡಿರುವ ಪತ್ರವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಕೆಐಎಡಿಬಿ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಯೋಜನೆ ವ್ಯಾಪ್ತಿಯಲ್ಲಿ ಕೃಷಿ ಭೂಮಿ ಇರುವ ಕುರಿತು ರೈತರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ರೈತರ ಪತ್ರದ ವಿವರಗಳು: ರೈತರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ಬರೆದ ಪತ್ರವು ಸರ್ಜಾಪುರ ಆನೇಕಲ್ ತಾಲ್ಲೂಕಿನ ಸ್ವಿಫ್ಟ್ ಸಿಟಿ ಭೂಸ್ವಾಧೀನದ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಕರ್ನಾಟಕ ರಾಜ್ಯ ಸರ್ಕಾರ ಆನೇಕಲ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಜಾಪುರ ಪ್ರದೇಶದಲ್ಲಿ ‘ಸ್ವಿಫ್ಟ್ ಸಿಟಿ’ ಯೋಜನೆಯನ್ನು ಅನುಷ್ಠಾನಗೊಳಿಸಲು ಒಂದು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವುದು ತಿಳಿದಿದ್ದು, ಸದರಿ ಜಾಗದಲ್ಲಿ ನಮ್ಮ ಭೂಮಿಯೂ ಸೇರಿರುತ್ತದೆ.
ತಮಗೆ ತಿಳಿದಿರುವಂತೆ ಈ ಪ್ರದೇಶದಲ್ಲಿ ಸರಿಯಾದ ಸಂಪರ್ಕ ರಸ್ತೆಗಳು ಇರುವುದಿಲ್ಲ, ರೈತರ ಜಮೀನಿನ ಜೊತೆಗೆ ಇಲ್ಲಿ ಗೋಮಾಳದ ಜಾಗವೂ ಸಾಕಷ್ಟಿದೆ. ಈ ಪ್ರದೇಶದಲ್ಲಿ ರೈತಾಪಿ ವರ್ಗದವರು ಅಲ್ಪ ಸಂಖ್ಯೆಯಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಹಲವರು ತಮ್ಮ ಜಮೀನಿಗೆ ಕರಾರು ಮಾಡಿಕೊಂಡು ವಿಲ್ಲಾ/ ವಿಲಾಸಿ ಜಾಗಗಳಿಗೆ ನೀಡಿರುತ್ತಾರೆ. ತಾವು ಕಂಡಂತೆ ಆನೇಕಲ್ ತಾಲ್ಲೂಕು ಪ್ರದೇಶದಲ್ಲಿ ಕೇರಳ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಮೂಲದ ರಿಯಲ್ ಎಸ್ಟೇಟ್ ಏಜೆಂಟರ ಹಾವಳಿ ಅತೀ ಹೆಚ್ಚಾಗಿದ್ದು, ಜಮೀನಿಗೆ ಸಂಬಂಧಿಸಿದಂತೆ ದಾವೆಗಳನ್ನು ಹೂಡುವ ಪ್ರಕರಣಗಳು ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿರುವ ಬಹುಪಾಲು ರಿಯಲ್ ಎಸ್ಟೇಟ್ ಕಂಪನಿಗಳ ಮಾಲೀಕರು ಕೇರಳ ಹಾಗೂ ಇತರೆ ರಾಜ್ಯಗಳ ಮೂಲದವರೇ ಆಗಿರುವುದು ತಮಗೆ ತಿಳಿದಿರುವ ಸಂಗತಿ.
ಸಾಮಾನ್ಯವಾಗಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಾಗ ಅಥವಾ ಅಭಿವೃದ್ಧಿಗಾಗಿ ಭೂಸ್ವಾಧೀನ ಕೈಗೊಂಡಾಗ ಕೆಲವರಿಗೆ ತೊಂದರೆ ಉಂಟಾಗುವುದು ಸಹಜ. ಆದರೆ ಇಲ್ಲಿ ಕೆಐಎಡಿಬಿ ವತಿಯಿಂದ ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದು ಕೈಗಾರಿಕಾ ಅಭಿವೃದ್ಧಿಗಾಗಿ ಆಗಿರುವುದರಿಂದ ಸಮಪರ್ಕವಾದ ಪರಿಹಾರ ಖಂಡಿತವಾಗಿಯೂ ಲಭಿಸುತ್ತದೆ. ಇಲ್ಲಿ ಕೈಗಾರಿಕಾ ಪಾರ್ಕ್ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಂದಾಗಿ ಸಹಜವಾಗಿಯೇ ರಸ್ತೆ ಸಂಪರ್ಕ ಅಭಿವೃದ್ಧಿಯಾಗುವುದರ ಜೊತೆಗೆ, ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯಯುತವಾದ ಬೆಲೆ ಹಾಗೂ ನಿಯಮಾನುಸಾರ ಅವರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಪರಿಹಾರ ನೇರವಾಗಿ ಜಮೀನಿನ ಮಾಲೀಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಅಲ್ಲದೆ, ನಗದು ಪರಿಹಾರದ ಬದಲು ಎಕರೆಗೆ ಸುಮಾರು 10,000 ಚ.ಅಡಿ, ಅಭಿವೃದ್ಧಿಪಡಿಸಿದ ಕೈಗಾರಿಕಾ ಪಾರ್ಕ್ ಭೂಮಿ ಸಿಗುವುದು ನಮ್ಮ ಕುಟುಂಬದ ಯುವಜನತೆಗೆ ಉದ್ಯಮ ಆರಂಭಿಸಲು ಅನುಕೂಲವೂ ಆಗಲಿದೆ. ಮೇಲಾಗಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿ ನಮ್ಮ ಭಾಗದ ಯುವಜನರಿಗೆ ತುಂಬಾ ಅನುಕೂಲವಾಗುತ್ತದೆ.
ಈಗ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದ ಬಹಿರಂಗಗೊಂಡಿರುವ ನಿಜ ಸಂಗತಿ ಏನೆಂದರೆ, ಈ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿರುವ ರಿಯಲ್ ಎಸ್ಟೇಟ್ ಆಸಕ್ತರು ಹಾಗೂ ಎಲ್ಲಾ ಅಭಿವೃದ್ಧಿ ವ್ಯವಸ್ಥೆ ಬೆಂಬಲಿಗರ ಕೈವಾಡವಿರುವುದಾಗಿದೆ. ಪರರಾಜ್ಯದ ರಿಯಲ್ ಎಸ್ಟೇಟ್ ಸಂಸ್ಥೆಗಳು/ ಏಜೆಂಟರು ತಮ್ಮ ವೈಯಕ್ತಿಕ ಲಾಭ ಗಳಿಸುವುದಕ್ಕಿಂತಲೂ, ನಮ್ಮ ರಾಜ್ಯದ ಅಭಿವೃದ್ಧಿ ಯೋಜನೆಗಳಿಗಾಗಿ ಇಲ್ಲಿ ಭೂಸ್ವಾಧೀನವಾಗಿ, ಉತ್ತಮ ಅಭಿವೃದ್ಧಿಯಾದರೆ, ಅದು ನಮ್ಮ ರೈತರಿಗೆ, ಭೂಮಾಲೀಕರಿಗೆ ಹಾಗೂ ನಮ್ಮ ರಾಜ್ಯಕ್ಕೆ ಮತ್ತು ನಮ್ಮ ಜನರಿಗೆ ಒಳ್ಳೆಯದಾಗುವುದು ನಿಶ್ಚಿತ. ಈ ಹಿಂದೆ ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿಯಾದ ಬಗೆಗಿನ ಸತ್ಯ ನಮ್ಮ ಕಣ್ಣ ಮುಂದಿದೆ. ಕೈಗಾರಿಕೋದ್ಯಮ ಅಭಿವೃದ್ಧಿಯಾದರೆ ನೇರವಾಗಿ ಹಾಗೂ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿ, ಸಣ್ಣ ಅಂಗಡಿಯಿಂದ ಹಿಡಿದು ಎಲ್ಲ ಸ್ಥರದ ಜನರಿಗ ಆರ್ಥಿ ಕಾಗಿ ಸಹಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ರೈತರ ಜಮೀನುಗಳು ಪರರಾಜ್ಯದ ರಿಯಲ್ ಎಸ್ಟೇಟ್ ಲಾಭದ ಪಾಲಾಗುವ ಬದಲು, ಕೈಗಾರಿಕೋದ್ಯಮ ಅಭಿವೃದ್ಧಿಯಾಗುವುದಕ್ಕೆ ಭೂಸ್ವಾಧೀನವಾಗುವುದು ನ್ಯಾಯಯುತ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಈ ಮೂಲಕ ನಮ್ಮ ಎರಡು ಬೇಡಿಕೆಯಾದ ಭೂಸಂತ್ರಸ್ತರಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು ಮತ್ತು ನಮ್ಮ ಮಕ್ಕಳಿಗೆ ನಿಯಮಾನುಸಾರ ಉದ್ಯೋಗ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದು ರೈತರು ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.