ಚಿಕ್ಕಬಳ್ಳಾಪುರ : ನಂದಿಗಿರಿಧಾಮದಲ್ಲಿ ಸರ್ಕಾರದ ಈ ವರ್ಷದ 14ನೇ ಸಚಿವ ಸಂಪುಟ ಸಭೆ ನಡೆಯಿತು. ವಿಶೇಷವಾಗಿ ಬೆಂಗಳೂರು ಕಂದಾಯ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಸಭೆಯ ನಂತರ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾಧ್ಯಮಕ್ಕೆ ಸಚಿವ ಸಂಪುಟ ಸಭೆಯ ಮಾಹಿತಿ ನೀಡಿದರು.

ನಂದಿಗಿರಿಧಾಮದಲ್ಲಿ ಬೆಂಗಳೂರು ಕಂದಾಯ ವಿಭಾಗದ ಸಚಿವ ಸಂಪುಟದ ಸಭೆ ಮಾಡಲಾಗಿದ್ದು, ಈ ಸಭೆಯಲ್ಲಿ ಶೇಕಡಾ 90ಕ್ಕೂ ಹೆಚ್ಚು ಬೆಂಗಳೂರು ವಿಭಾಗದ ವಿಷಯಗಳನ್ನೇ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇವತ್ತಿನ ಸಭೆಯಲ್ಲಿ 48 ವಿಷಯಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡಲಾಗಿದೆ. 48 ವಿಷಯಗಳಿಗೆ ಸಂಬಂಧಿಸಿದಂತೆ 3400 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಬೆಂಗಳೂರು ವಿಭಾಗ ಒಂದಕ್ಕೆ 2,050 ಕೋಟಿ ಹಣ ಮಂಜೂರಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು:
- ಬೆಂಗಳೂರು ಜಿಲ್ಲೆಗಳ 31 ವಿಷಯಗಳು ಚರ್ಚೆಯಾಗಿದ್ದು, 2,250 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.
- ಪ್ರತಿ ಜಿಲ್ಲೆಯಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ 1125.25 ಕೋಟಿ ಮಂಜೂರು ಮಾಡಲಾಗಿದೆ.
- ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆಗಳನ್ನೇ ಪ್ರಮುಖವಾಗಿ ಚರ್ಚಿಸಲಾಗಿದೆ.
- ಹಿಂದುಳಿದ ವರ್ಗದ ಅಭ್ಯರ್ಥಿಗಳು IAS, IRS, IPS ಸೇರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ 10 ಕೋಟಿ ವೆಚ್ಚದ ಎರಡು ವಸತಿ ಶಾಲೆ ಬೆಂಗಳೂರಿನಲ್ಲಿ ನಿರ್ಮಿಸಲಾಗುವುದು.
- ಬೆಂಗಳೂರು ಕೇಂದ್ರ ವಿವಿಗೆ “ಡಾ.ಮನಮೋಹನ್ ಸಿಂಗ್ ಬೆಂಗಳೂರು ಸಿಟಿ ವಿವಿ” ಎಂದು ಹೆಸರಿಡಲು ತೀರ್ಮಾನ.
- PHC ಗಳಿಲ್ಲದ ಹೊಸ ತಾಲೂಕುಗಳಲ್ಲಿ CHC ಗಳನ್ನು ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ “ಬೆಂಗಳೂರು ಉತ್ತರ ತಾಲೂಕು” ಎಂದು, ಬಾಗೇಪಲ್ಲಿಗೆ “ಭಾಗ್ಯನಗರ” ಎಂದು ಹೆಸರಿಡಲಾಗುವುದು ಎಂದರು.