ಬೆಂಗಳೂರು: ಬೆಂಗಳೂರಿನಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ನೀರಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಉತ್ತಮ ಮಳೆ, ಜಲಾಶಯಗಳ ಭರ್ತಿಯಿಂದಾಗಿ ಈ ಈ ವರ್ಷ ನೀರಿನ ಸರಬರಾಜಿಗೆ ತೊಂದರೆ ಇಲ್ಲ ಎನ್ನಲಾಗಿದೆ. ಆದರೆ ಬೆಂಗಳೂರಿನ ಕೆಲವು ಭಾಗಗಳು ವರ್ಷಪೂರ್ತಿ ಟ್ಯಾಂಕರ್ ನೀರೇ ಆಶ್ರಯಿಸಿ ಬದುಕುತ್ತಿದ್ದಾರೆ. ಅದಕ್ಕಾಗಿ ಸಾವಿರಾರು ರೂಪಾಯಿ ಭರಿಸುತ್ತಿದ್ದು, ಏಕರೂಪ ದರ ಇಲ್ಲದೇ, ಸರ್ಕಾರಕ್ಕೆ ಆಗ್ರಹಿಸಿದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನ ಕೆಲವು ಭಾಗಗಳು ವರ್ಷವಿಡೀ ಜಲಮಂಡಳಿಯ ಕಾವೇರಿ ನೀರಿನ ಸಂಪರ್ಕ ಬದಲಾಗಿ ನೀರಿನ ಟ್ಯಾಂಕರ್ಗಳ ಆಸರೆಯಿಂದ ಬದುಕುತ್ತಿದ್ದಾರೆ. ನೂರಾರು ಕುಟುಂಬಗಳಿಗೆ ಟ್ಯಾಂಕರ್ ನೀರೆ ಆಸರೆ. ಹೆಣ್ಣೂರು ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ನಿವಾಸಿಗಳು ಇಂದಿಗೂ ಶೇ. 60ರಷ್ಟು ಟ್ಯಾಂಕರ್ ನೀರನ್ನೇ ಅವಲಂಭಿಸಿದ್ದಾರೆ ಎಂದು ‘ಡಿಎಚ್’ ವರದಿ ಮಾಡಿದೆ.
ಟ್ಯಾಂಕರ್ ನೀರು ಪೂರೈಕೆದಾರರು ಬೇಸಿಗೆ ವೇಳೆ ದರ ಹೆಚ್ಚಿಸುತ್ತಾರೆ. ಒಂದೇ ತೆರನಾದ ದರ ನಿಗದಿ ಮಾಡದೇ ಬೇಡಿಕೆ ತಕ್ಕಂತೆ ಹೆಚ್ಚಿಸುತ್ತಾರೆ, ದುಡ್ಡು ಮಾಡಲು ಮುಂದಾಗುತ್ತಾರೆ. ಆದರೆ ಈ ಭಾಗದಲ್ಲಿ ವರ್ಷವಿಡಿ ನೀರು ಪೂರೈಕೆ ಮಾಡುತ್ತಾರಾದರೂ ಏಕರೂಪ ದರ ನಿಗದಿ ಮಾಡಿಲ್ಲ. ಅಸಮಂಜಸ ದರ ಇದ್ದು, ಸರ್ಕಾರ, ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಕ್ರಮ ವಹಿಸದೇ ಮೌನ ವಹಿಸಿವೆ ಎಂದು ಸ್ಥಳೀಯರು ದೂರಿದ್ದಾರೆ. ನೀರಿನ ಟ್ಯಾಂಕರ್ ಬೆಲೆ ಎಷ್ಟಿದೆ? ಹೆಣ್ಣೂರು ಭಾಗದಲ್ಲಿ ನೀರು ಪೂರೈಕೆಗೆ ಪ್ರತಿ 6,000 ಲೀಟರ್ ಟ್ಯಾಂಕರ್ಗೆ ರೂ. 600 ರಿಂದ 650 ಇದೆ. ನಿಮಗೇನಾದರೂ 12,000 ಲೀಟರ್ ಟ್ಯಾಂಕರ್ ನೀರು ಬೇಕಾದಲ್ಲಿ ನೀವು 1,400 ರೂಪಾಯಿ ಪಾವತಿಸಬೇಕು ಎಂದು ಟ್ಯಾಂಕರ್ ಪೂರೈಕೆದಾರರೊಬ್ಬರು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಟ್ಯಾಂಕ್ ನೀರು ಸುಮಾರು 2ರಿಂದ 3 ಕಿ.ಮೀ. ಗಿಂತಲೂ ದೂರ ಹಾಗೂ 4 ರಿಂದ 5 ಕಿ.ಮೀ. ಗಿಂತಲೂ ದೂರವಿದ್ದರೆ ಹೆಚ್ಚುವರಿಯಾಗಿ ಗ್ರಾಹಕರು ಸಪ್ಲೈಯರ್ಗೆ 100 ರೂಪಾಯಿ ನಿಡಬೇಕಾಗುತ್ತದೆ. ಒಬ್ಬ ಟ್ಯಾಂಕರ್ ದಿನಕ್ಕೆ ಕನಿಷ್ಠ ಏಳರಿಂದ ಎಂಟು ಟ್ಯಾಂಕ್ ನೀರು ಸರಬರಾಜು ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಬೇಸಿಗೆ ಮಾತ್ರವಲ್ಲದೇ ವರ್ಷ ಪೂರ್ತಿ ಈ ನೀರಿನ ಟ್ಯಾಂಕರ್ಗಳ ಮೇಲೆ ಅವಲಂಬಿತವಾದ ಕುಟುಂಬಗಳು ನೀರು ಬೇಕಾದಲ್ಲಿ ಈ ಅಸಮಂಜಸ, ಏಕರೂಪ ಅಲ್ಲದ ಬೆಲೆ ಕೊಟ್ಟು ನೀರು ಖರೀದಿಸಬೇಕಾದ ಅನಿವಾರ್ಯತೆ ಇದೆ. ಇದರ ಬೇರೆ ದಾರಿ ಇಲ್ಲ. ಬೇಸಿಗೆ ವೇಳೆ ಈ ಭಾಗದ ನೀರಿನ ಬೇಡಿಕೆ ಶೇಕಡಾ 90ರಷ್ಟಿರುತ್ತದೆ. ಪ್ರತಿ ಲೀಟರ್ ಟ್ಯಾಂಕರ್ ನೀರಿಗೆ ನಾವು 10 ಪೈಸೆಗೆ ಪಾವತಿಸುತ್ತಿದ್ದೇವೆ. ನೀರಿಗೆ ಬೇಕು ಮಾಸಿಕ 5000 ರೂ. ಸೂಕ್ತ ದರ ಇಲ್ಲದ ಕಾರಣ ನಮಗೆ ಆರ್ಥಿಕ ಹೊಡೆತ ಉಂಟಾಗುತ್ತಿದೆ. ಬೋರೆವೆಲ್ ಕೊರೆಸಿ ನೀರು ಪೂರೈಸುವಂತೆ ಈ ಭಾಗದ ಶಾಸಕರಲ್ಲಿ ಮನವಿ ಮಾಡಿದ್ದೇವೆ. ಇದರಿಂದ ಶೇಕಡಾ 40ರಷ್ಟು ನೀರಿನ ಬವಣೆ ನೀಗಲಿದೆ. ಹೊರಮಾವು ವ್ಯಾಪ್ತಿಯ ಮತ್ತೊಬ್ಬ ನಿವಾಸಿಯು ಪ್ರತಿಕ್ರಿಯಿಸಿ, ನಾವು ಎರಡು ವರ್ಷಗಳಿಂದ ಪ್ರತಿ ಟ್ಯಾಂಕರ್ಗೆ ಸುಮಾರು 1,000 ರೂ. ನೀಡಿ ನೀರು ಖರೀದಿಸುತ್ತಿದ್ದೇವೆ. ಮೂರು ಜನ ಇರುವ ನಮ್ಮ ಕುಟುಂಬಕ್ಕೆ ಮಾಸಿಕವಾಗಿ ನಾಲ್ಕರಿಂದ ಐದು ಟ್ಯಾಂಕ್ ನೀರು ಬೇಕು. ಅದಕ್ಕಾಗಿ ನಾವು 4ರಿಂದ 5ಸಾವಿರ ರೂ. ಪಾವತಿಸುತ್ತಿದ್ದೇವೆ. ಇದು ನಮಗೆ ಹೊರೆಯಾಗಿದೆ ಎಂದು ಬೇಸರ ಹಂಚಿಕೊಂಡಿದ್ದಾರೆ.
ಟ್ಯಾಂಕರ್ ಬೆಲೆ ಗರಿಷ್ಠ 2,200 ರೂ. ವೈಟ್ಫೀಲ್ಡ್ ವ್ಯಾಪ್ತಿಯಲ್ಲಿ ಪ್ರತಿ ಟ್ಯಾಂಕರ್ ಬೆಲೆ 1400 ನಿಂದ 2,200 ರೂ. ನಿದಗಿಯಾಗಿವೆ. ಬೇಸಿಗೆ ಹಿನ್ನೆಲೆಯಲ್ಲಿ ಸದ್ಯ ಟ್ಯಾಂಕರ್ಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿಯು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಏಕರೂಪ ದರ ನಿಗದಿ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಟ್ಯಾಂಕರ್ ದರಗಳು ಸಮಂಜಸ ಇವೆ: BWSSB ಈ ಕುರಿತು BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಟ್ಯಾಂಕರ್ ದರಗಳಲ್ಲಿ ವ್ಯತ್ಯಾಸವಾದಲ್ಲಿ ಕೂಡಲೇ ನಾವು ಬಿಬಿಎಂಪಿಗೆ ತಿಳಿಸುತ್ತೇವೆ. ಪಾಲಿಕೆಯೇ ಈ ಬಗ್ಗೆ ಕ್ರಮ ವಹಿಸುತ್ತದೆ. ಸದ್ಯ ಟ್ಯಾಂಕರ್ ದರಗಳು ಸಮಂಜಸವಾಗಿಯೇ ಇವೆ. ಬೇಡಿಕೆ ಇದ್ದಲ್ಲಿ ಬೋರ್ವೆಲ್ಗಳನ್ನು ಕೊರೆಸಬೇಕಾ? ಬೇಡವಾ ಎಂದು ನಾವು ಪರಿಗಣಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.