ಬೆಂಗಳೂರು : ರಾಜ್ಯದಲ್ಲೇ ಹಲವು ಸಮಸ್ಯೆಗಳಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಪಕ್ಕದ ಕೇರಳದ ಅಭಿವೃದ್ಧಿ ಮಾಡಲು ಮುಂದಾಗಿದೆ ಎನ್ನುವ ದೊಡ್ಡ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಗೆಲುವು ಸಾಧಿಸಿದ ವಯನಾಡಿಗೆ ರಾಜ್ಯ ಸರ್ಕಾರವು 100 ಮನೆ ಕಟ್ಟಿಕೊಡಲು ಮುಂದಾಗಿದೆ ಎಂದು ಜೆಡಿಎಸ್ ಆರೋಪ ಮಾಡಿದೆ. ಇದು ಕರುನಾಡಿಗೆ ಮಾರಿ, ಪರ ರಾಜ್ಯಕ್ಕೆ ಉಪಕಾರಿ, ಹೈಕಮಾಂಡ್ ಗುಲಾಮಗಿರಿ ಎಂದು ವ್ಯಂಗ್ಯ ಮಾಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಸಾವಿರಾರು ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ರಸ್ತೆಗಳು ಅಭಿವೃದ್ಧಿ ಕಾಣದೆ ಜನರ ನರಕಯಾತೆ ಅನುಭವಿಸುತ್ತಿದ್ದಾರೆ. ಆದರೆ, ಹೈಕಮಾಂಡ್ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು, ಕೇರಳ ಸಂಸದರನ್ನು ಮೆಚ್ಚಿಸಲು ಕರ್ನಾಟಕದ ಬೊಕ್ಕಸ ಬರಿದು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದೆ.
ಪ್ರಿಯಾಂಕಾ ಗಾಂಧಿ ಸಂಸದರಾಗಿರುವ ವಯನಾಡಿನಲ್ಲಿ 100 ಮನೆಗಳನ್ನು ಕಟ್ಟಿಕೊಡಲು ಹಾಗೂ ಭೂಮಿ ಖರೀದಿಯ ವೆಚ್ಚವನ್ನೂ ಬರಿಸುವುದಾಗಿ ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಯನಾಡಿಗೆ ಬಂದಿರುವುದೇ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ ಎಂದು ಆಕ್ರೋಶ ಹೊರಹಾಕಿದೆ. ಕೇರಳದಲ್ಲಿ ಆನೆ ದಾಳಿಗೆ ಬಲಿಯಾದರೂ ಕರ್ನಾಟಕದ ದುಡ್ಡನ್ನೇ ಕೊಡಬೇಕು. ಈಗ ವಯನಾಡಿಗೆ 100 ಮನೆ ಕೊಟ್ಟಿಕೊಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೋ ಕುಟುಂಬಗಳು ಸೂರಿಲ್ಲದೇ ನಿರ್ಗತಿಕರಾಗಿದ್ದಾರೆ. ಆದರೆ, ಇಟಲಿ ಮಾತೆ ಮತ್ತು ಅವರ ಮಕ್ಕಳನ್ನು ಮೆಚ್ಚಿಸಲು ಸಿದ್ದರಾಮಯ್ಯ ಅವರು ನಮ್ಮ ನಾಡಿನ ತೆರಿಗೆ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.