ಬೆಂಗಳೂರು : ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಪ್ರಕ್ರಿಯೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಿಎಂ ಸಿದ್ದರಾಯ್ಯ ಅವರ ಜೊತೆ ಚರ್ಚಿಸಿ ಸ್ಥಳವನ್ನು ಅಂತಿಮಗೊಳಿಸುವುದಾಗಿ ಹೇಳಿದ್ದರೂ ಅದಕ್ಕೆ ಇನ್ನಷ್ಟು ದಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ನೆಲಮಂಗಲ, ಹಾರೋಹಳ್ಳಿ ಬಳಿ ಸ್ಥಳಗಳನ್ನು ಗುರುತಿಸಿದ್ದು ಇವೆರಡರಲ್ಲಿ ಒಂದು ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗೃಹ ಸಚಿವ ಜಿ. ಪರಮೇಶ್ವರ್ ತುಮಕೂರು ಸಮೀಪ ಎರಡನೇ ವಿಮಾನ ನಿಲ್ದಾಣ ಬಂದರೆ ಉತ್ತಮ ಎಂದು ಹೇಳುತ್ತಿದ್ದಾರೆ. ಡಾಬಸ್ಪೇಟೆ ಬಳಿ ಒಂದು ಸ್ಥಳ ಗುರುತಿಸಿದ್ದರೆ, ಮಧುಗಿರಿ, ಶಿರಾ, ಕೊರಟಗೆರೆ ತಾಲೂಕುಗಳ ಗಡಿಗೆ ಹೊಂದಿಕೊಂಡಂತೆ ಒಂದು ಸ್ಥಳವನ್ನು ಗುರುತಿಸಲಾಗಿದೆ.
8000 ಎಕರೆಯನ್ನು ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾಗಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹತ್ತಿರವಿದ್ದು ಕೈಗಾರಿಕಾ ವಲಯದ ಅಭಿವೃದ್ಧಿಗೂ ಪೂರಕವಾಗಲಿದ ಎಂದು ಹೇಳಲಾಗಿದೆ. ಈ ಸ್ಥಳವೇ ಬೆಸ್ಟ್ ಯಾಕೆ? ಈಗ ಗುರುತಿಸಿರುವ ಜಾಗ ಬೆಂಗಳೂರು – ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವೇಗ ತುಂಬಲಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯವಾಗಿ ನಗರಗಳನ್ನು ಅಭಿವೃದ್ಧಿಪಡಿಸಬೇಕಾಗಿತ್ತು ತುಮಕೂರು ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಕೊರಟಗೆರೆ, ಮಧುಗಿರಿ ಮತ್ತು ಶಿರಾ ತಾಲೂಕುಗಳ ಅಭಿವೃದ್ಧಿಗೂ ಕೂಡ ಇದು ಗಣನೀಯ ಕೊಡುಗೆ ನೀಡುತ್ತದೆ. ಮುಖ್ಯವಾಗಿ ಬೆಂಗಳೂರಿಗೆ ಸಂಪರ್ಕವನ್ನು ಸುಗಮಗೊಳಿಸಲು ಕೂಡ ಸಹಕಾರಿಯಾಗುತ್ತದೆ.
ಈಗಾಗಲೇ ಪುಣೆ – ಬೆಂಗಳೂರು ಎಕ್ಸ್ಪ್ರೆಸ್ವೇ ಯೋಜನೆಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಈ ಎಕ್ಸ್ಪ್ರೆಸ್ವೇ ಈಗ ಗುರುತಿಸಲಾಗಿರುವ ವಿಮಾನ ನಿಲ್ದಾಣದ ಸಮೀಪದಲ್ಲೇ ಹಾದುಹೋಗಲಿದೆ. ಈಗಾಗಲೇ ಇರುವ ಮುಂಬೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೂಡ ಬೆಂಗಳೂರಿಗೆ ಸಂಪರ್ಕ ಒದಗಿಸುತ್ತದೆ. ಅದರ ಜೊತೆ ಪುಣೆ – ಬೆಂಗಳೂರು ಎಕ್ಸ್ಪ್ರೆಸ್ ಅಂತರವನ್ನು ಕಡಿಮೆ ಮಾಡುವ ಜೊತೆಗೆ ಸಮಯವನ್ನು ಕೂಡ ಉಳಿಸುತ್ತದೆ.
ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಉತ್ತರ ಕರ್ನಾಟಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಕೂಡ ಹೇಳಿದ್ದಾರೆ. ಸಚಿವ ಜಿ. ಪರಮೇಶ್ವರ್ ಅವರ ಕ್ಷೇತ್ರ ಕೂಡ ಕೊರಟಗೆರೆ ಆಗಿದ್ದು ಕ್ಷೇತ್ರದ ಬೆಳವಣಿಗೆಗೂ ಇದು ಸಹಕಾರಿಯಾಗುವ ಜೊತೆಗೆ ಜಿಲ್ಲೆಗೆ ಕೊಡುಗೆ ಕೊಟ್ಟಂತಾಗುತ್ತದೆ ಎಂದು ಇಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮನವಿ ಮಾಡಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು ಬೆಂಗಳೂರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಆಯ್ಕೆ ಮಾಡುವುದಾಗಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.