ಬೆಂಗಳೂರು : ಟ್ರಾಫಿಕ್ ಸಿಟಿ ಬೆಂಗಳೂರಿನ ಜನರಿಗೆ ಕಿರಿಕಿರಿಯಿಲ್ಲದ ಪ್ರಯಾಣದ ಸೇವೆ ಕಲ್ಪಿಸಲು ನಮ್ಮೆ ಮೆಟ್ರೋ ಜಾಲ ವಿವಿಧ ಹಂತಗಳಲ್ಲಿ ವಿಸ್ತರಣೆಗೊಳ್ಳುತ್ತಲೇ ಇದೆ. ಈಗಾಗಲೇ ಚಾಲ್ತಿಯಲ್ಲಿರುವ ಮೆಟ್ರೋ ಮಾರ್ಗಗಳ ಪೈಕಿ ಟ್ರಾಫಿಕ್ ಕಿರಿಕಿರಿಯಿಂದ ಜನ ಮುಕ್ತಿ ಪಡೆದಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿನ ದಕ್ಷಿಣ ಹಾಗೂ ಉತ್ತರದ ನಡುವೆ ಬರಲಿರುವ ಮೆಟ್ರೋ ಮಾರ್ಗವು ಕೂಡ ಟ್ರಾಫಿಕ್ ಜಾಮ್ನಿಂದ ನೆಮ್ಮದಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಕೋರಮಂಗಲ ಮತ್ತು ಮೇಖ್ರಿ ವೃತ್ತದ ಮೂಲಕ ಹಾದು ಹೋಗುವ ಸರ್ಜಾಪುರ-ಹೆಬ್ಬಾಳ ಮೆಟ್ರೋ ಲೈನ್ಗೆ (ಹಂತ 3A) ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಭಾಗಗಳ ನಡುವೆ ಸಂಪರ್ಕ ಸುಲಭವಾಗಲಿದೆ. ಈ ಮೆಟ್ರೋ ಜಾಲವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸಲಿದೆ.
ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವು ಬೆಂಗಳೂರಿನ ಗೇಮ್ಚೇಂಜರ್ ಎನ್ನಲಾಗಿದೆ. ಈ ಮಾರ್ಗವು ಸರ್ಜಾಪುರದಲ್ಲಿ ಆರಂಭವಾಗಿ ಇಬ್ಲೂರಿನಲ್ಲಿರುವ ನೀಲಿ ಮಾರ್ಗವಾದ ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಕೋರಮಂಗಲ ತಲುಪಿದ ನಂತರ ಭೂಗತ ಮಾರ್ಗದಲ್ಲಿ ಸಾಗುತ್ತದೆ. ಇನ್ನು ಡೈರಿ ವೃತ್ತದಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗದ ಗುಲಾಬಿ ಲೈನ್ ಅನ್ನು ಕೂಡ ಸಂಪರ್ಕಿಸಲಿದೆ. ಇದರಲ್ಲಿ ಭೂಗತ ಮಾರ್ಗವು ಟೌನ್ ಹಾಲ್, ಕೆ.ಆರ್.ಸರ್ಕಲ್, ಬಸವೇಶ್ವರ ಸರ್ಕಲ್ ಮತ್ತು ಗಾಲ್ಫ್ ಕೋರ್ಸ್ಗಳಲ್ಲಿ ಕೂಡ ನಿಲ್ದಾಣಗಳನ್ನು ಹೊಂದಿರಲಿದೆ. ಕೇಂದ್ರ ವಾಣಿಜ್ಯ ಪ್ರದೇಶ ದಲ್ಲಿ (ಸಿಬಿಡಿ) ಪ್ರದೇಶಗಳಲ್ಲಿ ಇದು ಪರ್ಪಲ್ ಲೈನ್ ಅನ್ನು ಹೊಸ ಮಾರ್ಗದೊಂದಿಗೆ ಸಂಯೋಜಿಸಲಿದೆ. ಹೆಬ್ಬಾಳದಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ನಿಲ್ದಾಣವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಇದು ನೀಲಿ ಮಾರ್ಗ ಹಾಗೂ ಕೆಂಪಾಪುರದಿಂದ ಜೆ.ಪಿ.ನಗರದ ಕಡೆಗೆ ಸಾಗುವ ಕಿತ್ತಳೆ ಮಾರ್ಗಕ್ಕೂ ಪ್ರವೇಶ ಒದಗಿಸಲಿದೆ.
ಸಮಗ್ರ ಸಂಚಾರ ಯೋಜನೆ-2020ರಲ್ಲಿ ಹೆಬ್ಬಾಳಕ್ಕೆ ಐಟಿ ಕಾರಿಡಾರ್ ಅನ್ನು ಸಂಪರ್ಕಿಸುವ ಮೆಟ್ರೋ ಮಾರ್ಗವನ್ನು ಸೇರಿಸಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಇದಕ್ಕೆ ಅನುಮೋದನೆ ನೀಡಿದ್ದಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಾಲವನ್ನು ಪಡೆದುಕೊಳ್ಳುವುದು ಸೇರಿದಂತೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುಮೋದನೆಯನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವು ಜನವರಿ 2025ರ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಶುರು ಮಾಡಲಿದೆ. ಇದು ನಗರದ ದಕ್ಷಿಣ ಕೈಗಾರಿಕಾ ಮತ್ತು ವಸತಿ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲಿದೆ. ಸುಮಾರು 5,745 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ ವ್ಯಾಪಿಸಿದೆ. ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯೂ ಸೇರಿದಂತೆ 16 ಪ್ರಮುಖ ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.