ಹಿಂದೂ ಧರ್ಮದಲ್ಲಿ, ನದಿಗಳನ್ನು ದೇವರೆಂದು ಪೂಜಿಸುತ್ತೇವೆ. ನದಿಯ ಸ್ನಾನವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣ ಮಾತ್ರವಲ್ಲ ಇದು ನಮ್ಮ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಾಗಾಗಿ ಒತ್ತಡ ಹೆಚ್ಚಾಗಿದ್ದರೆ, ಮಾನಸಿಕ ನೆಮ್ಮದಿ ಇಲ್ಲದಿದ್ದರೆ ತಿಂಗಳಲ್ಲಿ ಒಂದು ಬಾರಿಯಾದರು ನದಿ ನೀರಿನ ಸ್ನಾನ ಮಾಡಿ. ನಂತರ ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ನೀವೇ ನೋಡಿ.

ಹಿಂದೂ ಧರ್ಮದಲ್ಲಿ ನದಿ ಸ್ನಾನಕ್ಕೆ ಅದರದ್ದೇ ಆದಂತಹ ಮಹತ್ವವಿದೆ. ಏಕೆಂದರೆ ಭಾರತೀಯರು ನದಿಗಳನ್ನು ದೇವರಂತೆ ಪೂಜೆ ಮಾಡುತ್ತೇವೆ. ಹಾಗಾಗಿ ನಮ್ಮ ತಾಯ್ನಡಿನಲ್ಲಿ ಹರಿಯುವ ಪ್ರತಿಯೊಂದು ನದಿಯು ಕೂಡ ನಮಗೆ ಬಹಳ ಪವಿತ್ರ. ನದಿಯ ಸ್ನಾನವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧೀಕರಣವನ್ನು ಒದಗಿಸುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಾಗಿ ಎಲ್ಲಾ ಧರ್ಮಿಯರು ಕೂಡ ನದಿ ನೀರಿನ ಸ್ನಾನ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ಇದು ಕೇವಲ ಆತ್ಮದ ಶುದ್ಧೀಕರಣ ಬದಲಾಗಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ಅನೇಕ ರೀತಿಯ ರೋಗಗಳು ಕೂಡ ಶಮನವಾಗುತ್ತದೆ. ಹಾಗಾದರೆ ನದಿ ಸ್ನಾನ ಮಾಡುವುದರಿಂದ ಯಾವ ರೀತಿಯ ಲಾಭಗಳಿವೆ? ವರ್ಷದಲ್ಲಿ ಒಮ್ಮೆಯಾದರೂ ನದಿ ನೀರಿನ ಸ್ನಾನ ಮಾಡಬೇಕು ಎನ್ನಲು ಕಾರಣವೇನು ತಿಳಿದುಕೊಳ್ಳಿ.
ಹಿಂದೂ ಧರ್ಮದಲ್ಲಿ, ನದಿಗಳನ್ನು ದೇವರೆಂದು ಪೂಜಿಸುವುದರಿಂದ ನದಿಗೆ ಇಳಿಯುವಾಗ ಬರಿಗಾಲಿನಲ್ಲಿ ಹೋಗುತ್ತೇವೆ ಇದರಿಂದಲೂ ಕೂಡ ಅನೇಕ ರೀತಿಯ ಪ್ರಯೋಜನಗಳಿವೆ. ಪಾದರಕ್ಷೆಗಳನ್ನು ಧರಿಸದಿದ್ದಾಗ ನಮ್ಮ ಪಾದಗಳು ಭೂಮಿ ಮತ್ತು ನೀರಿನೊಂದಿಗೆ ನೇರ ಸಂಪರ್ಕದಲ್ಲಿರುವುದರಿಂದ ಭೂಮಿಯಲ್ಲಿನ ಶಕ್ತಿಯನ್ನು ಆಕರ್ಷಿಸುತ್ತದೆ. ಈ ರೀತಿಯ ಅನುಭವ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ನಕಾರಾತ್ಮಕ ಆಲೋಚನೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
ನದಿ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳು:
• ನದಿಯ ನೀರಿನಲ್ಲಿ ಮುಳುಗಿ ಏಳುವಾಗ ನಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೊತೆಗೆ ದೇಹದಲ್ಲಿ ರಕ್ತಪರಿಚಲನೆ ಸುಧಾರಿಸುತ್ತದೆ.
• ನೀರಿನಲ್ಲಿರುವ ಖನಿಜಗಳು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
• ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ಕಾಲುಗಳಲ್ಲಿನ ನೋವು ಕಡಿಮೆಯಾಗುತ್ತದೆ. ಮಂಡಿ ನೋವಿನಿಂದ ಬಳಲುವವರು ತಿಂಗಳಲ್ಲಿ ಒಂದು ಬಾರಿಯಾದರೂ ನದಿಯ ನೀರಿನಲ್ಲಿ ಮುಳುಗಿ ಏಳಬೇಕು.
• ಭೂಮಿಯೊಂದಿಗಿನ ನಮ್ಮ ಸಂಪರ್ಕವು ಹೆಚ್ಚಾಗುವುದರಿಂದ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
• ನದಿ ನೀರು ನಮ್ಮ ಮನಸ್ಥಿತಿ ವರ್ಧನೆಗೆ ಸಹಕಾರಿಯಾಗಿದ್ದು ಆತಂಕ ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತವೆ.
• ಈಗಿನವರ ಜೀವನಶೈಲಿ ಬಹಳ ಒತ್ತಡದಿಂದ ಕೂಡಿರುತ್ತದೆ. ಈ ಸಮಯದಲ್ಲಿ ಕೆಲಸ, ಕುಟುಂಬ ಯಾವುದರಲ್ಲಿಯೂ ನೆಮ್ಮದಿ ಇರುವುದಿಲ್ಲ. ಅಂತವರು ವರ್ಷದಲ್ಲಿ ಎರಡು ಬಾರಿ ಅಥವಾ ಮೂರು ಬಾರಿ ನದಿ ಅಥವಾ ತೊರೆಗಳ ಬಳಿ ಕಾಲನ್ನಿಟ್ಟು ಕುಳಿತುಕೊಳ್ಳಬೇಕು ಇದರಿಂದ ಮನಸ್ಸಿನಿಂದ ನಕಾರಾತ್ಮಕ ಆಲೋಚನೆ ದೂರವಾಗಿ, ಒತ್ತಡ ಕಡಿಮೆಯಾಗುತ್ತೆ ಮನಸ್ಸು ನಿರಾಳವಾಗುತ್ತದೆ.
• ನದಿ ನೀರು ಒಂದು ರೀತಿಯ ಔಷಧ ಅಥವಾ ಚಿಕಿತ್ಸೆ ಇದ್ದಂತೆ. ನೀರಿನ ಹಿತವಾದ ಶಬ್ದ ನಮ್ಮ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. ದೇಹಕ್ಕೆ ವಿಶ್ರಾಂತಿ ನೀಡುತ್ತದೆ.
• ನದಿ ನೀರಿನಲ್ಲಿ ಮುಳುಗಿ ಏಳುವುದರಿಂದ ಕಾರ್ಟಿಸೋಲ್ ಮಟ್ಟ, ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.
• ಕೆಲವು ಸಂಶೋಧನೆಗಳಿಂದ ತಿಳಿದು ಬಂದಿರುವ ಪ್ರಕಾರ, ಸಂವೇದನಾ ಅನುಭವಗಳು ಅಂದರೆ ನದಿಯ ಸುತ್ತಮುತ್ತಲಿನ ಪರಿಸರವನ್ನು ನೋಡುವುದು, ಶಬ್ದಗಳನ್ನು ಗಮನ ಕೊಟ್ಟು ಕೇಳುವುದರಿಂದ ಬುದ್ಧಿವಂತಿಕೆ ಹೆಚ್ಚಾಗುತ್ತದೆ.
• ಸ್ನಾನ ಮಾಡುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು;
ನದಿಯ ನೀರು ಸುರಕ್ಷಿತ ಮತ್ತು ಸ್ನಾನಕ್ಕೆ ಸ್ವಚ್ಛವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನದಿಯ ಆಳದ ಬಗ್ಗೆ ತಿಳಿದಿರಲಿ. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ, ನದಿ ನೀರಿನಲ್ಲಿ ಸ್ನಾನ ಮಾಡುವ ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.