ಬೆಂಗಳೂರು: ಬೇಸಿಗೆ ಬಂತು ಅಂತ ಪ್ರವಾಸಕ್ಕೆ ಹೋಗುವ ಮುನ್ನ ಮನೆ ಮಾಲೀಕರು ಎಚ್ಚರದಿಂದ ಇರಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಬೇಸಿಗೆ ಕಾಲದ ರಜೆಗಳು ಆರಂಭವಾಗಿವೆ. ಇದರಿಂದಾಗಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಇದೇ ಸಮಯವನ್ನಿಟ್ಟುಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಯಲು ಮುಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.

ಹೌದು ಇದೀಗ ಮಕ್ಕಳಿಗೆ ಬೇಸಿಗೆ ಕಾಲದ ರಜೆ ಶುರುವಾಗಿವೆ. ಈ ದಿನಗಳಲ್ಲಿ ಪೋಷಕರು ಮಕ್ಕಳೊಂದಿಗೆ ಪ್ರವಾಸ ಅಥವಾ ಸಂಬಂಧಿಕರ ಮನೆಗಳಿಗೆ ತೆರಳುವುದು ಹೆಚ್ಚು. ಈ ಸಮಯದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ ಮನೆ ಮಾಲೀಕರು ಕೆಲ ಮುಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಬಿ ದಯಾನಂದ್ ಅವರು ಹೇಳಿದ್ದಾರೆ.
ಒಂದಕ್ಕಿಂತ ಹೆಚ್ಚು ದಿನ ಮನೆಯಲ್ಲಿ ಇಲ್ಲದೇ ಇದ್ದರೆ, ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚುವುದು ಮಾತ್ರವಲ್ಲದೆ ಮನೆಯ ಕಿಟಕಿಗಳನ್ನು ಭದ್ರವಾಗಿ ಮುಚ್ಚಿ. ಅಲ್ಲದೆ ಮನೆಯ ಅಕ್ಕಪಕ್ಕದ ವಿಶ್ವಾಸವಿರುವ ಜನರಿಗೆ ನೀವು ಮನೆಯಲ್ಲಿ ಇಲ್ಲದೇ ಇರುವುದನ್ನು ತಿಳಿಸಿರಿ. ಮನೆಗೆ ಗಟ್ಟಿಯಾದ ಬೀಗವನ್ನು ಹಾಕುವುದು ಒಳ್ಳೆಯದು. ಮುಖ್ಯವಾಗಿ ಒಂದಕ್ಕಿಂತ ಹೆಚ್ಚು ದಿನ ಪ್ರವಾಸಕ್ಕೆ ಹೋಗುವವರು ಮನೆಯಲ್ಲಿ ಚಿನ್ನಾಭರಣಗಳನ್ನು ಹಾಗೂ ಹೆಚ್ಚು ಹಣವನ್ನು ಇಡಬಾರದು ಎಂದಿದ್ದಾರೆ. ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಹೆಚ್ಚು ಹಣ ಇದ್ದರೆ ಬ್ಯಾಂಕ್ ಖಾತೆಗಳಲ್ಲಿ ಅದನ್ನು ಭದ್ರವಾಗಿ ಇಡಿ. ಸಾಧ್ಯವಾದರೆ ಮನೆಗೆ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಮನೆಯ ಬೀಗವನ್ನು ಮನೆಯ ಪಕ್ಕದಲ್ಲಿ, ಶೂಗಳಲ್ಲಿ, ಇನ್ನಿತರ ಯಾವುದೇ ಸ್ಥಳದಲ್ಲಿ ಇಟ್ಟು ಹೊರ ಹೋಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಡಿ. ಒಂದು ವೇಳೆ ಒಂದಕ್ಕಿಂತ ಹೆಚ್ಚು ದಿನ ಮನೆಯಲ್ಲಿ ಇರುವುದಿಲ್ಲ ಅಂತಾದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಹೋಗುವುದು ಸುರಕ್ಷಿತ. ಇದರಿಂದ ಆ ಸ್ಥಳದಲ್ಲಿ ಪೊಲೀಸರಿಗೆ ಗಸ್ತು ನಡೆಸುವುದು ಸುಲಭವಾಗುತ್ತದೆ ಎಂದು ಬಿ ದಯಾನಂದ್ ಹೇಳಿದ್ದಾರೆ.
ಅಲ್ಲದೆ ಕಳ್ಳರು ಮನೆಯಿಂದ ಹೊರಗಡೆ ಮಾತ್ರ ಇರುವುದಿಲ್ಲ. ಮನೆಯಲ್ಲೂ ಇರುತ್ತಾರೆ. ಮನೆ ಕೆಲಸವರಂತೆ ನಿಮ್ಮ ಮನೆ ಕೆಲಸಕ್ಕೆ ಸೇರಿಕೊಳ್ಳಬಹುದು. ಅವರಿಂದ ಹಣ ಚಿನ್ನಾಭರಣಗಳನ್ನು ದೂರವಿಡಿ. ಅವರನ್ನು ಎಲ್ಲಂದರಲ್ಲಿ ಓಡಾಡಲು ಬಿಡಬೇಡಿ. ಅವರಿಗೆ ಕಾಣುವಂತೆ ಚಿನ್ನಾಭರಣ ಹಾಗೂ ಹಣವನ್ನು ಇಡಬಾರದು. ಇಂತಹ ಸಣ್ಣ ಅಜಾಗರೂಕತೆಯಿಂದ ಕಷ್ಟಪಟ್ಟು ದುಡಿದ ಹಣವನ್ನು ನೀವು ಕಳೆದುಕೊಳ್ಳಬಹುದು ಎಂದು ಬಿ ದಯಾನಂದ್ ಅವರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಬೇಸಿಗೆ ರಜೆ ಆರಂಭವಾಗುವುದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಜನ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದಿದ್ದಾರೆ. ಇತ್ತೀಚೆಗೆ ಹಲವೆಡೆ ನೇಪಾಳಿ ಗ್ಯಾಂಗ್ ಸಕ್ರಿಯವಾಗಿತ್ತು. ನೇಪಾಳಿ ಗ್ಯಾಂಗ್ ಅನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಇಂತಹ ಗ್ಯಾಂಗ್ಗಳು ಹೆಚ್ಚು ಸಕ್ರಿಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮನೆ ಬಿಟ್ಟು ಹೋಗುವಾಗ ವಿಶೇಷವಾಗಿ ಒಂದಕ್ಕಿಂತ ಹೆಚ್ಚು ದಿನಗಳವರೆಗೆ ಪ್ರವಾಸ ಹೋಗುವವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗಿದೆ.