ಬಾಗಲಕೋಟೆ: ಹೇರ್ಡ್ರೈಯರ್ ಬ್ಲಾಸ್ಟ್ ಆಗಿ ಹುತಾತ್ಮ ಯೋಧನ ಪತ್ನಿಯ ಎರಡೂ ಮುಂಗೈ ಕಟ್ ಆಗಿ ಛಿದ್ರಗೊಂಡಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ಇಳಕಲ್ ನಗರದಲ್ಲಿ ಈ ಘಟನೆ ನಡೆದಿದ್ದು, ಆನ್ಲೈನ್ನಲ್ಲಿ ಬಂದ ಹೇರ್ ಡ್ರೈಯರ್ ಬಳಸಲು ಮುಂದಾದಾಗ ಹೇರ್ಡ್ರೈಯರ್ ಬ್ಲಾಸ್ಟ್ ಆಗಿದೆ.
ಹೇರ್ಡ್ರೈಯರ್ ಸ್ಫೋಟಗೊಂಡ ಪರಿಣಾಮ ಬಸಮ್ಮ ಯರನಾಳ ಎಂಬುವವರ ಎರಡು ಕೈಗಳ ಮುಂಗೈ (ಹಸ್ತಗಳು) ಛಿದ್ರ ಛಿದ್ರವಾಗಿದ್ದು, ಬೆರಳುಗಳೆಲ್ಲ ಗುರುತೇ ಸಿಗದಂತೆ ಚೆಲ್ಲಾಪಿಲ್ಲಿಯಾಗಿದೆ.
ಬಸಮ್ಮ ಯರನಾಳ ಅವರು ಹುತಾತ್ಮ ಯೋಧನ ಪತ್ನಿಯಾಗಿದ್ದು, ಬಸಮ್ಮ ಅವರ ಪತಿ ಪಾಪಣ್ಣ ಮಾಜಿ ಯೋಧರಾಗಿದ್ದಾರೆ. 2028ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಪಾಪಣ್ಣ ಮೃತಪಟ್ಟಿದ್ದರು. ಗಂಡನನ್ನು ಕಳೆದುಕೊಂಡಿದ್ದ ಬಸಮ್ಮ ಅವರು ಬಾಗಲಕೋಟೆಯ ಇಳಕಲ್ ನಗರದಲ್ಲಿ ವಾಸಿಸುತ್ತಿದ್ದರು. ಇದೀಗ ಈ ಘಟನೆಯಿಂದ ಅವರು ತಮ್ಮ ಕೈಗಳನ್ನು ಕಳೆದುಕೊಂಡಿದ್ದಾರೆ.
ಪಾರ್ಸಲ್ ಬಂದಿದ್ದು ಯಾರಿಗೆ?
ಅಂದಹಾಗೆ ಆನ್ಲೈನ್ನಲ್ಲಿ ಬಂದಿದ್ದ ಈ ಹೇರ್ಡ್ರೈಯರ್ ಬಸಮ್ಮ ಅವರ ಹೆಸರಿಗೆ ಬಂದಿದ್ದಾಗಿರಲಿಲ್ಲ. ಶಶಿಕಲಾ ಎಂಬುವರ ಹೆಸರು ನಂಬರ್ ಹೊಂದಿದ್ದ ಡಿಟಿಡಿಸಿ ಪಾರ್ಸಲ್ ಕೊರಿಯರ್ ಇದಾಗಿದ್ದು, ಶಶಿಕಲಾ ಪತಿ ಕೂಡ ಮೃತ ಯೋಧರಾಗಿದ್ದಾರೆ. ಪಾರ್ಸಲ್ನಲ್ಲಿ ಶಶಿಕಲಾ ಹೆಸರು ಮೊಬೈಲ್ ನಂಬರ್ ಇದ್ದ ಕಾರಣ ಕೊರಿಯರ್ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು.
ಬಸಮ್ಮ ಅವರು ಕೊರಿಯರ್ ಓಪನ್ ಮಾಡಿದಾಗ ಅದರಲ್ಲಿ ಹೇರ್ ಡ್ರೈಯರ್ ಇತ್ತು. ಬಸಮ್ಮ ಅವರಿಗೆ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಅಂದಿದ್ದಕ್ಕೆ ಸ್ವಿಚ್ ಹಾಕಿ ಆನ್ ಮಾಡಿದ್ದೇ ತಡ ಬ್ಲಾಸ್ಟ್ ಜೋರಾಗಿ ಸದ್ದು ಕೇಳಿ ಬಂದಿದೆ. ಕ್ಷಣ ಮಾತ್ರದಲ್ಲಿ ಬಸಮ್ಮ ಅವರ ಕೈ ಪುಡಿ ಪುಡಿಯಾಗಿದ್ದು, ನಂತರ ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಶಿಕಲಾ ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ!
ಸದ್ಯದ ಮಾಹಿತಿ ಪ್ರಕಾರ ಶಶಿಕಲಾ ಅವರು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ ಎಂದು ಹೇಳಲಾಗಿದ್ದು, ಆದರೆ ಅವರ ಹೆಸರಲ್ಲಿ ಹೇರ್ ಡ್ರೈಯರ್ ಕೊರಿಯರ್ ಬಂದಿದೆ. ಇದನ್ನು ಆರ್ಡರ್ ಮಾಡಿದವರು ಯಾರು? ಅದಕ್ಕೆ ಹಣ ಸಂದಾಯ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಪ್ಯಾಕ್ ಆಗಿ ಬಂತು ಎಂದು ಇಳಕಲ್ ಪೊಲೀಸರು ತನಿಖೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಹೇರ್ ಡ್ರೈಯರ್ ವಿಶಾಖಪಟ್ಟಣದಲ್ಲಿ ಮೆನುಪ್ಯಾಕ್ಚರ್ ಆಗಿದ್ದು, ಬಾಗಲಕೋಟೆಯಿಂದ ಕೋರಿಯರ್ ಬಂದಿದೆ ಎನ್ನಲಾಗಿದೆ. ಇದರ ಹಿಂದಿನ ಕಾರಣಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.