ಬೆಂಗಳೂರು: ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್ಗಳನ್ನು ಮಟ್ಟ ಹಾಕಬೇಕಿದೆ. ಅವರಿಗೆ ನೆರವು ಕೊಡುವುದು, ಬೇಲ್ ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಕೂಡ ಬಿಡಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಗುಡುಗಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟವು ಮುಂದುವರಿಯಲಿದೆ ಎಂದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧ ಖಂಡಿಸಿದರು. ಉಗ್ರರಿಗೆ ಬುದ್ಧಿ ಕಲಿಬೇಕಿದೆ. ಅದಕ್ಕಿಂತ ಮೊದಲು ಇಂತಹ ಕೃತ್ಯಕ್ಕೆ ಸಹಾಯ ಮಾಡುವ ದೇಶದ ಒಳಗಿನ ಸ್ಲೀಪರ್ ಸೆಲ್ ಇಲ್ಲವಾಗಿಸಬೇಕು ಎಂದು ಅವರು ಹೇಳಿದರು
ಏಪ್ರಿಲ್ 28 ರಿಂದ 3 ದಿನ ಹೋರಾಟ ಕಾಂಗ್ರೆಸ್ ಸರ್ಕಾರ ಮಾಡಿದ ಬೆಲೆ ಏರಿಕೆಯ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ. ಎಲ್ಲ ವಲಯ ಆಯುಕ್ತರ ಕಚೇರಿಯ ಮುಂದೆ ಏಪ್ರಿಲ್ 28 ರಿಂದ ಮೂರು ದಿನಗಳ ಕಾಲ ಹೋರಾಟ ಮಾಡಲಾಗುತ್ತದೆ. ಹಾಲು, ವಿದ್ಯುತ್ ಹಾಗೂ ಆಸ್ತಿ ತೆರಿಗೆ ಹಾಗೂ ಪಾರ್ಕಿಂಗ್ ಶುಲ್ಕದ ಬಗ್ಗೆ ಹೋರಾಟ ಮಾಡಲಾಗುವುದು. ಬೆಂಗಳೂರಿನ ಜನರ ಮೇಲೆ ಕಾಂಗ್ರೆಸ್ ಭರಪೂರ ತೆರಿಗೆಗಳನ್ನು ಹೇರಿದೆ. ಪ್ರತಿ ಮನೆಗಳಿಗೆ ಹೋಗಿ ಕರಪತ್ರ ಹಂಚಲಾಗುವುದು. ಬಿಬಿಎಂಪಿ ಚುನಾವಣೆಯನ್ನು ಸರ್ಕಾರ ಮುಂದೂಡುತ್ತಿದೆ. ಈ ಬಗ್ಗೆ ಕೂಡ ಹೋರಾಟ ಮಾಡಲಾಗುವುದು.
ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಜೊತೆ ಚರ್ಚಿಸಲಾಗಿದೆ. ಈ ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ಯೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇದು ಅಸಂವಿಧಾನಿಕವಾದ ಕ್ರಮ.
ಗ್ರೇಟರ್ ಬೆಂಗಳೂರು ವಿಧೇಯಕದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ರಾಜ್ಯಪಾಲರು ಸಹಿ ಹಾಕಿದರೆ ಅದು ಕಾಂಗ್ರೆಸ್ ಪರ ಎನ್ನುತ್ತಾರೆ, ಸಹಿ ಹಾಕದೇ ಇದ್ದರೆ ಅದು ಬಿಜೆಪಿ ಕಚೇರಿ ಎಂದು ಟೀಕಿಸುತ್ತಾರೆ ಎಂದು ತಿಳಿಸಿದರು.
KPSC ನಡೆಸುವ ಕೆಎಎಸ್ ಪರೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ. ಅಧಿವೇಶನದಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದಾಗ ತೀರ್ಪು ಬಂದ ಮೇಲೆ ಮರು ಪರೀಕ್ಷೆ ಬಗ್ಗೆ ಮುಕ್ತ ಮನಸ್ಸಿನಿಂದ ಪರಿಶೀಲನೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದರು. ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಗಮನಿಸಿ ಮುಂದೆ ಅಗತ್ಯಬಿದ್ದರೆ ಮುಂದೆಯೂ ಹೋರಾಟ ಮಾಡಲಾಗುವುದು ಎಂದರು. ಕಾಂಗ್ರೆಸ್ ನಾಯಕರು ದೇಶದ ಯೋಧರ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಮತ್ತೆ ಇವರಿಗೆ ಯಾರ ಮೇಲೆ ನಂಬಿಕೆ ಇದೆ? ಇಡೀ ದೇಶ ಒಂದಾಗಿ ಭಯೋತ್ಪಾದಕ ದಾಳಿಯನ್ನು ಖಂಡಿಸಬೇಕು. ಉಗ್ರರು ಹಿಂದೂ ಎಂದು ಹೇಳಿಯೇ ಹುಡುಕಿ ಕೊಂದಿದ್ದಾರೆ. ಬೇಹುಗಾರಿಕೆ ಸರಿಯಲ್ಲ, ಯೋಧರು ಸರಿಯಲ್ಲ ಎಂದು ಟೀಕೆ ಮಾಡುವುದು ಸರಿಯಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟವಾದಾಗ ಯಾರು ವಿಫಲರಾಗಿದ್ದರು? ಕುಕ್ಕರ್ ಬಾಂಬ್ ಸ್ಪೋಟಗೊಂಡಾಗ ಯಾರು ವಿಫಲರಾಗಿದ್ದರು? ಸಚಿವರ ವಿರುದ್ಧ ಹನಿಟ್ರ್ಯಾಪ್ ನಡೆಯುತ್ತಿರುವಾಗ ಯಾರು ವಿಫಲರಾಗಿದ್ದಾರೆ? ಇಂತಹ ಕಾಂಗ್ರೆಸ್ ಪಕ್ಷ ದೇಶದ ಯೋಧರ ಬಗ್ಗೆ ಮಾತಾಡುವುದು ಬೇಡ ಎಂದು ಅವರು ಎಚ್ಚರಿಸಿದರು.
ಬೆಂಗಳೂರಿನಲ್ಲೂ ಸ್ಲೀಪರ್ ಸೆಲ್: ಆರ್.ಅಶೋಕ್ ಭಯೋತ್ಪಾದಕರು ಮುಸ್ಲಿಮರನ್ನು ಮುಟ್ಟದೆ ಹಿಂದೂಗಳನ್ನೇ ಹುಡುಕಿ ಗುರಿ ಮಾಡಿ ಕೊಂದಿದ್ದಾರೆ. ಸ್ಥಳೀಯರು ಸ್ಲೀಪರ್ ಸೆಲ್ಗಳಾಗಿ ಇದಕ್ಕೆ ಬೆಂಬಲ ನೀಡಿದ್ದಾರೆ. ಕರ್ನಾಟಕ, ಬೆಂಗಳೂರಿನಲ್ಲೂ ಸ್ಲೀಪರ್ ಸೆಲ್ಗಳಿದ್ದಾರೆ. ಉಗ್ರರು ಬಂದಾಗ ಅವರಿಗೆ ವೋಟರ್ ಐಡಿ ಮಾಡಿಕೊಡುವ ದಂಧೆಯೂ ಇದೆ. ಇದು ಹಿಂದೂಗಳಿಗೆ ಎಚ್ಚರಿಕೆಯ ಗಂಟೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ. ಭಾರತ ಜಗತ್ತಿನಲ್ಲೇ ಬಲಿಷ್ಠ ಸೇನಾಪಡೆ ಹೊಂದಿದೆ ಎಂದು ಇತ್ತೀಚೆಗೆ ಅವರು ಪ್ರತಿಕ್ರಿಯಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ತಕ್ಕ ಕ್ರಮ ಕೈಗೊಂಡರೆ, ರಾಜ್ಯದಲ್ಲೂ ಸರ್ಕಾರ ಸ್ಲೀಪರ್ ಸೆಲ್ಗಳನ್ನು ಪತ್ತೆ ಹಚ್ಚಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು. ಕಾಶ್ಮೀರದಲ್ಲಿ ನಡೆದಿರುವುದು ಅತೀವ ದುಃಖ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ, ಅಭಿವೃದ್ಧಿಗೆ ದಾರಿ ಮಾಡಿದ್ದರು. ನಾನು ಕೂಡ ಎರಡು ವರ್ಷಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದ್ದೆ. ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿತ್ತು. ಬಹುಸಂಖ್ಯಾತ ಮುಸ್ಲಿಮರು ಪ್ರತಿ ದಿನ 10,000 ರೂ. ಸಂಪಾದನೆ ಮಾಡುತ್ತಿದ್ದೇವೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಈಗ ಪಾಕಿಸ್ತಾನ ಪ್ರೇರಿತವಾದ ಭಯೋತ್ಪಾದಕ ಸಂಘಟನೆ ಹೇಯ ಕೃತ್ಯ ಮಾಡಿದೆ ಎಂದಿದ್ದಾರೆ. ಬಿಜೆಪಿ ಜನಾಕ್ರೋಶ ಯಶಸ್ವಿ ಕರ್ನಾಟಕ ರಾಜ್ಯಾದ್ಯಂತ ಸಾರಿಗೆ ಬಸ್, ನಮ್ಮ ಮೆಟ್ರೋ, ಹಾಲು, ವಿದ್ಯುತ್ ಹೀಗೆ ಜನಬಳಕೆಯ ಅಗತ್ಯ ವಸ್ತುಗಳ ದರ ಏರಿಕೆ ಮಾಡಲಾಗಿದೆ. ಇದು ಜನರಿಗೆ ಆರ್ಥಿಕ ಹೊರೆ ಉಂಟು ಮಾಡಿದೆ. ಈ ದುಬಾರಿ ದುನಿಯಾದಲ್ಲಿ ಮಧ್ಯಮ ಹಾಗೂ ಬಡ ವರ್ಗದವರ ಬದುಕು ಹೇಳತೀರದಾಗಿದೆ. ಕಾಂಗ್ರೆಸ್ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳು, ಜನಸಾಮಾನ್ಯರು, ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಬಿಜೆಪಿಯು ರಾಜ್ಯದ ವಿವಿಧ ಭಾಗಗಳಲ್ಲಿ ಜನಾಕ್ರೋಶ ಯಾತ್ರೆ ಮಾಡಿದರು. ಸರ್ಕಾರದ ಭ್ರಷ್ಟಾಚಾರ, ದರ ಏರಿಕೆ, ವಿವಿಧ ಯೋಜನೆಗಳ ಹಣವನ್ನು ಪಂಚ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ವಿವಿಧ ಬಿಜೆಪಿ ಸಂಸದರು, ಸ್ಥಳೀಯ ಮುಖಂಡರು, ಸಹಸ್ರಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದರು. ಇದೀಗ ಬೆಲೆ ಏರಿಕೆ ವಿರುದ್ಧ ಮೂರು ದಿನ ಬೆಂಗಳೂರಿನ ಮತ್ತೊಂದು ಸುತ್ತಿನ ಪ್ರತಿಭಟನೆಯನ್ನು ಬಿಜೆಪಿ ಹಮ್ಮಿಕೊಂಡಿದೆ.