ಬೆಂಗಳೂರು: ಕೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು.. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು. ಈ ಹಾಡನ್ನು ಕನ್ನಡಿಗರೆಲ್ಲ ಕೇಳಿಯೇ ಇರ್ತಾರೆ. ನಾವು ನೋಡಿದ್ದು ಕೇಳಿದ್ದು ಎರಡೂ ಸುಳ್ಳಾಗಿರಬಹುದು ಯೋಚಿಸಿ ನೋಡಬೇಕು ಅಂತ. ಅಂತಹದ್ದೇ ಒಂದು ಘಟನೆ ಬೆಂಗಳೂರಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದೆ ವೈರಲ್ ಆಗಿರುವ ವಿಡಿಯೋ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು.
ಅದರಲ್ಲಿ ಕೃಷ್ಣ ಎನ್ನುವವರು ನಾನು ಇಂಜಿನಿಯರ್ ಮತ್ತು ಪ್ರತಿಷ್ಠಿತ ವಿಲೇಜ್ ಟೆಕ್ ಪಾರ್ಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದೆಲ್ಲ ಹೇಳಿಕೊಂಡಿದ್ದರು. ಒಂದು ಕಾಲದಲ್ಲಿ ಇಂಜಿನಿಯರ್ ಆಗಿರುವವರು ಇದೀಗ ಬೆಂಗಳೂರಿನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದೇನೆ ಎಂದೆಲ್ಲ ಹೇಳಲಾಗಿತ್ತು. ಈ ವಿಷಯಕ್ಕೆ ಹಲವರು ಮರುಗಿದ್ದರು. ಆದರೆ, ಅವರು ಹೇಳಿದ್ದೆಲ್ಲ ಸುಳ್ಳು ಎನ್ನುವುದು ಈಗ ಬಹಿರಂಗವಾಗಿದೆ.
ಅಲ್ಲದೇ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ನಿಮ್ಹಾನ್ಸ್ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ದಿನವೂ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ.
ನೋಡುವವರಿಗೆ ಇದು ನಿಜವೇ ಇರಬೇಕು ಅಂತಲೂ ಅನಿಸುತ್ತೆ. ವಿಡಿಯೋಗಳನ್ನು ಸ್ಕ್ರೋಲ್ ಮಾಡುತ್ತಾ ಹೋಗುವಾಗ ಯಾರೂ ಸಹ ಇದನ್ನು ಅಂದಾಜು ಸಹ ಮಾಡಲ್ಲ. ಇನ್ನು ಕೃಷ್ಣ ಎನ್ನುವವರ ವಿಡಿಯೋವನ್ನು ಬ್ಲಾಗರ್ ಶರತ್ ಯುವರಾಜ್ ಎನ್ನುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಮೊದಲ ವಿಡಿಯೋದಲ್ಲಿ ಕೃಷ್ಣ ಅವರು ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಹಾಗೂ ಬೆಂಗಳೂರಿನ ವಿಲೇಜ್ ಟೆಕ್ ಪಾರ್ಕ್ನ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡಿದ್ದೆ ಎಂದೆಲ್ಲ ಹೇಳಿಕೊಂಡಿದ್ದರು. ಅಲ್ಲದೇ ಸಂಪೂರ್ಣ ಇಂಗ್ಲೀಷ್ನಲ್ಲೇ ಮಾತನಾಡಿದ್ದು ನೋಡಿ ಜನರಿಗೂ ಇದರ ಬಗ್ಗೆ ಅನುಮಾನ ಬಂದಿರಲಿಲ್ಲ. ಅಲ್ಲದೇ ಹಲವರು ಇವರನ್ನು ಹುಡುಕುವ ಪ್ರಯತ್ನ ಮಾಡಿದ್ದರು.
ನೆಟ್ಟಿಗರು ಹೇಗಾದರೂ ಇವರಿಗೆ ಸಹಾಯ ಮಾಡಬೇಕು. ಇವರು ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವಂತೆ ಸಹಾಯ ಮಾಡಬೇಕು ಎಂದೆಲ್ಲ ಅಭಿಪ್ರಾಯಪಟ್ಟಿದ್ದರು. ಹಲವರು ಇದನ್ನು ನೋಡಿ ಮರುಗಿದ್ದರು. ಆದರೆ, ಇದೀಗ ಅವರು ಕುಡಿದ ಅಮಲಿನಲ್ಲೂ ಹಾಗೂ ಆರೋಗ್ಯ ಸಮಸ್ಯೆಯಿಂದ ಈ ರೀತಿ ಮಾತನಾಡಿದ್ದಾರೆ ಎಂದು ಮತ್ತೊಂದು ವಿಡಿಯೋದಲ್ಲಿ ಹೇಳಲಾಗಿದೆ.
ಮತ್ತೊಂದು ವಿಡಿಯೋದಲ್ಲಿ ಕೃಷ್ಣ ಅವರು ಅವರ ಕುಡಿತದ ಚಟದ ಬಗ್ಗೆ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಆಗಿರುವ ಕೆಲವು ತಪ್ಪುಗಳಿಂದ ನಾನು ಕುಡಿಯುವುದನ್ನು ಕಲಿತೆ ಅದು ಆ ಮೇಲೆ ಭಿಕ್ಷೆ ಬೇಡುವಂತೆ ಮಾಡಿತು. ನಾನು ಈಗಾಗಲೇ ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ನನ್ನ ತಪ್ಪುಗಳ ಬಗ್ಗೆ ನನಗೆ ವಿಷಾದವಿದೆ ನಾನು ಹೊಸ ಜೀವನ ಕಟ್ಟಿಕೊಳ್ಳಬೇಕು. ಕುಡಿತದ ಚಟದಿಂದ ದೈಹಿಕ ಹಾಗೂ ಮಾನಸಿಕವಾಗಿ ನಾನು ಈಗಾಗಲೇ ಕುಗ್ಗಿ ಹೋಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಕಲ್ಪನಾ ಲೋಕದಲ್ಲಿ… ಇನ್ನು ಇದೇ ವಿಡಿಯೋದಲ್ಲಿ ಕೃಷ್ಣ ಅವರು ತಾವು ಕಲ್ಪನಾ ಜೀವನದಲ್ಲಿ ಜೀವಿಸುತ್ತಿರುವುದಾಗಿ ಹೇಳಿಕೊಂಡಿರುವುದು ಇದೆ. ಅತಿಯಾಗಿ ಕುಡಿದಾಗ ನಾನು ಕಲ್ಪನಾ ಜೀವನ ನಡೆಸುತ್ತೇನೆ. ಎಚ್ಚರವಾದ ಮೇಲೆ ಅದೆಲ್ಲ ಸುಳ್ಳು ಅಂತ ತಿಳಿಯುತ್ತದೆ. ಧರ್ಮಶಾಲಾ ಹೆಸರಿನಲ್ಲಿ ಶಾಲೆ
ನಿರ್ಮಿಸಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ, ನಿಜ ಜೀವನದಲ್ಲಿ ಅದು ಸಾಧ್ಯವಾಗಿಲ್ಲ. ಕಾಲ್ಪನಿಕ ಜೀವನದಲ್ಲಿ ನಾನು ಈಗಾಗಲೇ ಶಾಲೆ ಪ್ರಾರಂಭಿಸಿದ್ದೇನೆ. ಅಲ್ಲಿ ಮಕ್ಕಳು ನನಗಾಗಿ ಕಾಯುತ್ತಿದ್ದಾರೆ ಎನಿಸುತ್ತದೆ ಎಂದು ಅವರು ಮಾತನಾಡಿರುವುದು ವಿಡಿಯೋದಲ್ಲಿ ಇದೆ.