ಬೆಳಗಾವಿ: ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಬಿಮ್ಸ್) ಆಸ್ಪತ್ರೆಯಲ್ಲಿ ಮಂಗಳವಾರ ಮತ್ತೋರ್ವ ಬಾಣಂತರಿ ಸಾವು ವರದಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈ ನಡುವೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಕುರಿತು ಜನರಲ್ಲಿ ಆತಂಕ ಕೂಡ ಹೆಚ್ಚಾಗತೊಡಗಿದೆ.
ಸೋಮವಾರ ಸಂಜೆ ಹೆರಿಗೆ ನೋವಿನಿಂದಾಗಿ 31 ವರ್ಷದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ರಾತ್ರಿ ಸಿಸೇರಿಯನ್ ನಡೆಸಲಾಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಬೆಳಗಾವಿ ತಾಲೂಕಿನ ನೀಲಜಿ ಗ್ರಾಮದ ನಿವಾಸಿ ಅಂಜಲಿ ನಿಂಗಾನಿ ಪಾಟೀಲ್ ಎಂದು ಗುರುತಿಸಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಅಂಜಲಿ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಅಲತಗಾ ಗ್ರಾಮದವರಾದ ಅಂಜಲಿ 12 ವರ್ಷಗಳ ಹಿಂದೆ ನೀಲಜಿಯ ನಿಂಗಾಣಿ ಪಾಟೀಲ್ ಎಂಬುವವರನ್ನು ವಿವಾಹವಾಗಿದ್ದರು. 12 ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಪಡೆದ ಸಂತಸದಲ್ಲಿ ದಂಪತಿಗಳಿದ್ದರು.
ಅಂಜಲಿ ಪಾಟೀಲ್ ಅವರ ಸಂಬಂಧಿ ರಾಹುಲ್ ಮಾತನಾಡಿ, ‘ಅಂಜಲಿ ಆರೋಗ್ಯವಾಗಿದ್ದರು. ಕಾಲ್ನಡಿಗೆಯ ಮೂಲಕ ಸೋಮವಾರ ಆಸ್ಪತ್ರೆಗೆ ಬಂದಿದ್ದರು. ಸೋಮವಾರವೇ ಹೆರಿಗೆ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದಾಗ, ಮತ್ತೆ ಗಂಡನ ಮನೆಗೆ ಮರಳಿದ್ದರು. ಈ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಂಜೆ ಮತ್ತೆ ಆಸ್ಪತ್ರೆ ಬಂದಾಗ, ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಯಿತು. ಆಸ್ಪತ್ರೆ ಸಿಬ್ಬಂದಿ ಆಕೆಯ ಪತಿಗೆ ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಹೇಳಿದ್ದರು. 12 ಗಂಟೆ ವೇಳೆಗೆ ನಮ್ಮ ಬಳಿಗೆ ಬಂದ ಆಸ್ಪತ್ರೆಯ ಸಿಬ್ಬಂದಿ ಅಂಜಲಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಹಿತಿ ನೀಡಿದರು.