ಬೆಳಗಾವಿ: ಸೊಸೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಪತಿ ಮತ್ತವನ ಪೋಷಕರು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಸಂತೋಷ ಹೊನಕಾಂಡೆ (27) ಕೊಲೆಯಾದ ಮೃತ ದುರ್ದೈವಿ. ಸೊಸೆಗೆ ಮಕ್ಕಳಾಗಲಿಲ್ಲವೆಂದು ಕಳೆದ ಶನಿವಾರದಂದು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹೊನಕಾಂಡೆ, ಅತ್ತೆ ಜಯಶ್ರೀ ಹೊನಕಾಂಡೆ ಎಂಬುವರನ್ನು ಅಥಣಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಿನಾಂಕ 17.05.2025 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮಲಬಾದಿ ಗ್ರಾಮದ ಹತ್ತಿರ ಆರೋಪಿತರಾದ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಇವರು ತಮ್ಮ ಮೋಟಾರ್ ಸೈಕಲ್ ಮೇಲೆ ಅವರ ಸೊಸೆ ರೇಣುಕಾ ಸಂತೋಷ್ ಹೊನಕಾಂಡೆಯನ್ನು ಕೂರಿಸಿಕೊಂಡು ಹೋಗಿ, ರಸ್ತೆ ಮೇಲೆ ರೇಣುಕಾರನ್ನು ಕೆಳಕ್ಕೆ ಕೆಡವಿದ್ದಾರೆ. ನಂತರ ಅವಳ ತಲೆಗೆ ಕಲ್ಲಿನಿಂದ ಜಜ್ಜಿ, ಕುತ್ತಿಗೆಗೆ ಸೀರೆಯಿಂದ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಇದಾದ ನಂತರ ಆರೋಪಿತ ಹಂತಕರು ದ್ವಿಚಕ್ರ ವಾಹನಕ್ಕೆ ಸೀರೆ ತಗುಲಿ ಬಿದ್ದು ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದರು. ನಂತರ ಅವಳನ್ನು ಕೊಲೆ ಮಾಡಿದ ಸ್ಥಳದಿಂದ ಸುಮಾರು 120 ಅಡಿ ದೂರದವರೆಗೆ ಬೈಕ್ನಿಂದ ಎಳೆದುಕೊಂಡು ಹೋಗಿ, ಅವಳು ಬೈಕ್ ಮೇಲಿನಿಂದ ಬಿದ್ದು ಸತ್ತುಹೋಗಿದ್ದಾಳೆ ಎಂಬ ಅಪಘಾತದ ದೃಶ್ಯ ಸೃಷ್ಟಿಸಿದ್ದಾರೆ.
ನಂತರ ನಮ್ಮ ತನಿಖೆಯಲ್ಲಿ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಹೊನಕಾಂಡೆ ಇವರು ಕಂಡುಬಂದಿದ್ದರಿಂದ ಮತ್ತು ಕೊಲೆಗೆ ಆರೋಪಿತರ ಮಗ ಸಂತೋಷ್ ಬೆಂಬಲ ನೀಡಿದ್ದು ತಿಳಿದು ಬಂದಿದ್ದರಿಂದ ಅಥಣಿ ಪೊಲೀಸ್ ಠಾಣೆಯಲ್ಲಿ ಮೂರು ಜನ ಆರೋಪಿತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.