ಬೆಳಗಾವಿ: ಸಿಡಿಲು ಬಡಿದು ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಬೆಳಗಾವಿ ತಾಲ್ಲೂಕಿನ ಖನಗಾವ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಅತ್ಸಾ ಮೆಹಬೂಬ್ ಜಮಾದಾರ್ (15) ಮೃತ ಬಾಲಕಿ. ಶಾಲೆಗೆ ರಜೆ ಇದ್ದ ಹಿನ್ನೆಲೆ ತಾಯಿಯೊಂದಿಗೆ ಬಾಲಕಿ ತಮ್ಮ ಜಮೀನಿಗೆ ಹೋಗಿದ್ದಳು. ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಮಳೆ ಶುರುವಾಗುತ್ತಿದ್ದಂತೆ ಮನೆ ಕಡೆ ಬರುತ್ತಿದ್ದರು. ಈ ವೇಳೆ ಅತ್ಸಾ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಂದೆ ಮೆಹಬೂಬ್ ಜಮಾದಾರ್ ಮಾಧ್ಯಮಗಳ ಜೊತೆಗೆ ಮಾತನಾಡಿ, “ಮಧ್ಯಾಹ್ನ 4 ಗಂಟೆ ಸುಮಾರಿಗೆ ಸಿಡಿಲು ಬಡಿದು ನನ್ನ ಮಗಳು ಸಾವನ್ನಪ್ಪಿದ್ದಾಳೆ. ಎತ್ತಿನ ಚಕ್ಕಡಿಯಲ್ಲಿ ಹೋಗೋಣ ಬಾ ಅಂತಾ ಕರೆದೆ, ಇಲ್ಲ ಅಪ್ಪ ನಾನು ಅವ್ವನ ಜೊತೆ ನಡೆದುಕೊಂಡು ಬರುತ್ತೇನೆ ಅಂದಳು. ಈಗ ನೋಡಿದರೆ ಮಗಳು ನಮ್ಮೆಲ್ಲರನ್ನು ಬಿಟ್ಟೇ ಹೋಗಿದ್ದಾಳೆ. ನನಗೆ ಐವರು ಮಕ್ಕಳು. ಅದರಲ್ಲಿ ಈಕೆ ಮೂರನೇಯವಳು” ಎಂದು ಕಣ್ಣೀರು ಹಾಕಿದರು.