ಬಳ್ಳಾರಿ: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮುತ್ತು ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಮೇ ಅಂತ್ಯಕ್ಕೆ ನೈಋತ್ಯ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆ ಇದೆ. ಪೂರ್ವ ಮುಂಗಾರು ಮಳೆ ಸಂದರ್ಭದಲ್ಲಿ ಗುಡುಗು, ಮಿಂಚು ಆರ್ಭಟ ಹೆಚ್ಚಾಗಿರುತ್ತದೆ. ಇದು ಜನರ, ಜಾನುವಾರುಗಳ ಪ್ರಾಣಕ್ಕೆ ಸಹ ತೊಂದರೆ ಉಂಟು ಮಾಡುತ್ತದೆ. ಆದ್ದರಿಂದ ಗುಡುಗು-ಸಿಡಿಲಿನ ಸಂದರ್ಭದಲ್ಲಿ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಜನರು ಸುರಕ್ಷಿತವಾಗಿ ಇರಬಹುದು ಎಂದು ಸೂಚಿಸಲಾಗಿದೆ.

“ಸಾಮಾನ್ಯವಾಗಿ ಮುಂಗಾರು ಆರಂಭದ ಪೂರ್ವದಲ್ಲಿ ಹಾಗೂ ಮುಂಗಾರಿನ ಮಳೆಗಾಲದಲ್ಲಿ ಕಂಡುಬರುವ ಗುಡುಗು-ಸಿಡಿಲಿನಿಂದಾಗುವ ಅಪಾಯಗಳನ್ನು ತಪ್ಪಿಸಲು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು” ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.
ಮೇ ತಿಂಗಳಿನಲ್ಲಿ ಕಂಡುಬರುವ ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯವಾಗಿದ್ದು, ಜೊತೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಕಂಡುಬರುವುದು ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗುಡುಗು-ಸಿಡಿಲು ಸಹಿತ ಮಳೆ ಕಂಡುಬರುತ್ತಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಕರೆ ನೀಡಲಾಗಿದೆ. ಅಲ್ಲದೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೊರಡಿಸುವ ಮಾರ್ಗಸೂಚನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯದ ದೃಷ್ಟಿಯಿಂದ ನೀಡುವ ಸಲಹೆಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಲಾಗಿದೆ ಅನುಸರಿಸಬೇಕಾದ ಕ್ರಮಗಳು * ಬಯಲು ಪ್ರದೇಶಗಳಲ್ಲಿ, ಗಿಡಗಳ ಕೆಳಗೆ ಅಥವಾ ಕಬ್ಬಿಣದಿಂದ ಕೂಡಿರುವ ಕಟ್ಟಡ ಅಥವಾ ಶೆಡ್ಗಳಲ್ಲಿ ಆಶ್ರಯ ಪಡೆಯದೇ ಸೂಕ್ತ ಸ್ಥಳದಲ್ಲಿ ಆಶ್ರಯ ಪಡೆಯಬೇಕು. ಇದರಿಂದ ಜೀವ ಹಾನಿ ತಪ್ಪಿಸಲು ಸಾಧ್ಯವಾಗುತ್ತದೆ. ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ಬಯಲಿನಲ್ಲಿದ್ದರೆ ತಕ್ಷಣ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು.
* ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. * ಮರಗಳಿದ್ದ ಪ್ರದೇಶದಲ್ಲಿದ್ದರೆ ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. ಏಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ. * ಎತ್ತರದ ಗುಡ್ಡದ ಮೇಲಿದ್ದರೆ ತಗ್ಗು ಪ್ರದೇಶಕ್ಕೆ ಹೋಗಬೇಕು. ಕುರಿಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ಏಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷ್ಯನನ್ನೇ ಆರಿಸಿಕೊಳ್ಳುತ್ತದೆ.
* ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ. ನೀರಿನಲ್ಲಿದ್ದರೆ ತಕ್ಷಣ ಹೊರಬೇಕು. ವಿದ್ಯುತ್ ಕಂಬ, ಎಲೆಕ್ಟ್ರಿಕ್ ಟವರ್, ಮೊಬೈಲ್ ಟವರ್ ಟ್ರಾನ್ಸ್ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬಾರದು. * ಮಳೆ ಬರುವ ಸಮಯದಲ್ಲಿ ಮನೆಯ ಮೇಲ್ಛಾವಣಿ ಸ್ವಚ್ಛ ಮಾಡುವ ಸಾಹಸ ಬೇಡ, ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ. * ಗುಡುಗು-ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ನಲ್ಲಿ ಮಾತನಾಡಬಾರದು. ಚಾರ್ಚ್ ಮಾಡುವ ಸಾಹಸವೂ ಬೇಡ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ, ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೇ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. * ಕಂಪ್ಯೂಟರ್, ಲ್ಯಾಪ್ಟ್ಯಾಪ್ಗಳಿಂದ ದೂರವಿರಿ, ಮನೆಯ ಕಾಂಕ್ರೀಟ್ ಗೋಡೆಗಳನ್ನು ಸ್ಪರ್ಶಿಸದೇ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಿಡಿಲು ಬಾಧಿತ ವ್ಯಕ್ತಿಗಳು ಆಗಮಿಸಿದಾಗ ತಕ್ಷಣ ಚಿಕಿತ್ಸೆ ಕ್ರಮ ಕೈಗೊಳ್ಳುವ ಕುರಿತು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಗತ್ಯ ಔಷಧಿ ದಾಸ್ತಾನು ಸಹ ಇಟ್ಟುಕೊಳ್ಳಲಾಗಿದೆ.