ಬಳ್ಳಾರಿ : ನಗರದ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿಯೇ ಬರೋಬ್ಬರಿ 5 ಬಾಣಂತಿಯರು ಸಾವನ್ನಪಿದ್ದರು. ಈ ಘಟನೆಯ ನಂತರವೂ ರಾಜ್ಯ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆಯುತ್ತಲೇ ಇದೆ. ಇದೀಗ ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಅಶ್ವಿನಿ ಮಗು ಜನಿಸಿದ 2 ದಿನಗಳ ಬಳಿಕ ಇದೀಗ ಅಶ್ವಿನಿ (30) ಸಾವಿಗೀಡಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸಾಗರದ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಬಾಣಂತಿ ಅಶ್ವಿನಿ ಅವರನ್ನು ದಾಖಲಿಸಲಾಗಿತ್ತು. ಆಗ ವೈದ್ಯರು ಭ್ರೂಣದ ಸಮಸ್ಯೆ ಇದೆ ಎಂದು ಹೇಳಿ ಚಿಕಿತ್ಸೆ ನೀಡಿದ್ದರು. ಆದರೆ, ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಮಹಿಳೆಗೆ ತೀವ್ರ ರಕಸ್ತ್ರಾವ ಶುರುವಾಗಿತ್ತು. ಎಪಿಟಿಟಿ ಎಂಬ ರಕ್ತ ಹೆಪ್ಪುಗಟ್ಟುವಿಕೆ ವಿಳಂಬವಾಗುವ ಆರೋಗ್ಯ ಸಮಸ್ಯೆಯಿಂದಾಗಿ ನಿರಂತರ ರಕ್ತಸ್ರಾವವಾಗಿ ಅಶ್ವಿನಿ ಸಾವನಪ್ಪಿದ್ದಾರೆ.
ಚಿಕಿತ್ಸೆ ಮಾಡುವುದು ಕ್ಲಿಷ್ಟಕರ ಎಂದು ಗೊತ್ತಾಗುತ್ತಿದ್ದಂತೆ ಸಾಗರ ತಾಲೂಕು ಸರ್ಕಾರಿ ವೈದ್ಯರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಬಂದಾಗ ವೈದ್ಯರು ಸಾವನಪ್ಪಿರುವುದನ್ನು ಧೃಢಪಡಿಸಿದ್ದಾರೆ.
ಕೇವಲ ಒಂದುವರೆ ವರ್ಷದ ಹಿಂದೆ ಮದುವೆಯಾಗಿದ್ದ ಅಶ್ವಿನಿ, ಹೊಸನಗರ ತಾಲೂಕಿನ ನಗರ ಪಟ್ಟಣದ ಪ್ರಕಾಶ್ ಎಂಬುವವರನ್ನು ಮದುವೆಯಾಗಿದ್ದರು. ಅಶ್ವಿನಿ ಶವದ ಮರಣೋತ್ತರ ಪರೀಕ್ಷೇಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಇನ್ನಾದರೂ ಸರ್ಕಾರ ಈ ಕುರಿತು ಹೆಚ್ಚಿನ ಗಮನ ಹರಿಸಬೇಕಿದೆ.