ಬಳ್ಳಾರಿ: ಬಳ್ಳಾರಿ ಬಿಮ್ಸ್ (BIMS) ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿಯ ಸಾವಾಗಿದೆ. ಕೇವಲ 15 ದಿನಗಳ ಅಂತರಲ್ಲಿ 3 ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಳ್ಳಾರಿ ತಾಲ್ಲೂಕಿನ ಕಕ್ಕಬೇವನಳ್ಳಿ ಗ್ರಾಮದ 25 ವರ್ಷದ ಗಂಗಮ್ಮ ಫೆಬ್ರವರಿ 14 ರಂದು ನಿಧನರಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಗಂಗಮ್ಮ ಸಾವಾಗಿದೆ ಎಂಬ ಆರೋಪ ಕೇಳಿಬಂದಿದೆ,
ಗಂಗಮ್ಮ ಜನವರಿ 6 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಬಳಿಕ ಅವರನ್ನು ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಗೆ ದಾಖಲಿಸಲಾಗಿದೆ. ಸ್ವಲ್ಪ ಚೇತರಿಸಿಕೊಂಡ ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಳಿಕ ಫೆಬ್ರವರಿ 14 ರಂದು ನಿಧನರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 15 ದಿನಗಳ ಅಂತರದಲ್ಲಿ ಇದು ಮೂರನೇ ಸಾವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿರುಗುಪ್ಪ ತಾಲ್ಲೂಕಿನ 23 ವರ್ಷದ ಬಾಣಂತಿ ಹೆರಿಗೆಯ ನಂತರ ಪ್ಯಾನಿಕ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ರೆಡ್ಡಿ ಅವರು ಮಾತನಾಡಿ, ಫೆಬ್ರವರಿ 1 ರಿಂದ 14 ರವರೆಗೆ, ಮೂವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದ್ದು, ಈ ಸಾವುಗಳಿಗೆ ವೈದ್ಯರು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದಾರೆ.
ಬಿಮ್ಸ್ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ವೈದ್ಯರ ನಿರ್ಲಕ್ಷ್ಯವನ್ನು ತಳ್ಳಿಹಾಕಲಾಗುವುದಿಲ್ಲ. ಸರಿಯಾದ ಮತ್ತು ಸಕಾಲಿಕ ಚಿಕಿತ್ಸೆಯು ರೋಗಿಗಳ ಜೀವಗಳನ್ನು ಉಳಿಸಬಹುದು ತಿಳಿಸಿದ್ದಾರೆ.
ಘಟನೆಗಳ ಬೆನ್ನಲ್ಲೇ ಜಿಲ್ಲಾಡಳಿತವು ಸಾಮಾಜಿಕ ಜಾಗೃತಿ, ಹೆರಿಗೆ ಕೊಠಡಿಗಳಿಗೆ ಭೇಟಿಗಳು, ತಜ್ಞ ವೈದ್ಯರೊಂದಿಗೆ ಸಮಾಲೋಚನೆಯಂತಹ ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ, ಇದು ತಾಯಿಯ ಮರಣ ಸಂಖ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.