ಬಳ್ಳಾರಿ || paddy prices ಕುಸಿತ : ಲಾಭದ ನಿರೀಕ್ಷೆಯಲ್ಲಿದ್ದ Farmer ಕಂಗಾಲು

ಬಳ್ಳಾರಿ || paddy prices ಕುಸಿತ : ಲಾಭದ ನಿರೀಕ್ಷೆಯಲ್ಲಿದ್ದ Farmer ಕಂಗಾಲು

ಬಳ್ಳಾರಿ : ಜಿಲ್ಲೆಯಲ್ಲಿ ಎರಡು ಬಾರಿ ಭತ್ತದ ಬೆಳೆದು ಖುಷಿಯಲ್ಲಿದ್ದ ರೈತರು ಭತ್ತದ ಧಾರಣೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ.

ತುಂಗಭದ್ರಾ ಜಲಾಶಯದಿಂದ ನೀರು ಹರಿದಿದ್ದರಿಂದ ರೈತರು ಎರಡು ಭತ್ತದ ಬೆಳೆ ಬೆಳೆದಿದ್ದರು. ಉತ್ತಮ ಇಳುವರಿ ಬಂದಿದ್ದರಿಂದಾಗಿ ತಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ವಹಿವಾಟಿನ ಮೇಲೆ ಪರಿಣಾಮ ಹಾಗೂ ನೆರೆ ರಾಜ್ಯಗಳಲ್ಲಿ ಆವಕ ಹೆಚ್ಚಳವಾಗಿದ್ದರಿಂದಾಗಿ ಭತ್ತದ ಧಾರಣೆ ಇಳಿಕೆಯಾಗಿದೆ.

ಕಳೆದ ವರ್ಷ ಭತ್ತದ ಒಂದೇ ಬೆಳೆ ಬೆಳೆದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿತ್ತು. ಈ ವರ್ಷ ಎರಡು ಬೆಳೆ ಬೆಳೆದಿದ್ದ ರೈತ ಭತ್ತಕ್ಕೆ ಒಳ್ಳೆಯ ಬೆಲೆ ದೊರೆತು ಲಾಭ ಕಾಣಬಹುದು ಎಂದು ಕನಸ್ಸು ಕಂಡಿದ್ದ. ಆದರೆ ದರದಲ್ಲಿ ಕುಸಿತವಾಗಿರುವುದರಿಂದಾಗಿ ಅನ್ನದಾತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಮಾರ್ಚ್ ಆರಂಭದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆರ್ಎನ್ಆರ್ ತಳಿಯ ಪ್ರತಿ ಕ್ವಿಂಟಾಲ್ ಭತ್ತಕ್ಕೆ 2,800 ಮತ್ತು ಸೋನಾ ಮಸೂರಿಗೆ 2,600 ದರ ಇತ್ತು. ಈಗ ಆರ್ಎನ್ಆರ್ ತಳಿಯ ಭತ್ತಕ್ಕೆ ಕ್ವಿಂಟಾಲ್ಗೆ 1,600, ಗಿಡ್ಡ ಆರ್ಎನ್ಆರ್ಗೆ 1,550 ಹಾಗೂ ಗಂಗಾ ಕಾವೇರಿ ದರ 1,400ಕ್ಕೆ ಕುಸಿದಿದೆ.

ಟ್ರಂಪ್ ಸುಂಕ ನೀತಿಯಿಂದ ದರ ಕುಸಿತ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕ ನೀತಿಯು ಜಾಗತಿಕ ಮಟ್ಟದಲ್ಲಿ ಅಕ್ಕಿ ರಫ್ತು ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಭಾರತದ ಮೇಲೆ ಟ್ರಂಪ್ ಆಡಳಿತವು ಶೇ. 26ರಷ್ಟು ಪ್ರತಿ ಸುಂಕ ಹೇರಿದೆ. ಸದ್ಯ ಇದಕ್ಕೆ 90 ದಿನಗಳವರೆಗೆ ವಿರಾಮ ನೀಡಲಾಗಿದೆ. ಅಮೆರಿಕ ಸೇರಿ ಹಲವು ದೇಶಗಳಿಗೆ ಭಾರತದಿಂದ ಅಕ್ಕಿ ರಫ್ತಾಗುತ್ತದೆ. ಸುಂಕ ನೀತಿಯಿಂದಾಗಿ ರಫ್ತು ವಹಿವಾಟು ಅಸ್ತವ್ಯಸ್ತಗೊಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತುಂಗಭದ್ರಾ ಜಲಾಶಯ ತುಂಬಿದ್ದರಿಂದ ಕರ್ನಾಟಕದಂತೆಯೇ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಭತ್ತದ ಎರಡು ಬೆಳೆ ಬೆಳೆಯಲಾಗಿದೆ. ಅಲ್ಲಿನ ಅಕ್ಕಿಯ ಮಾರುಕಟ್ಟೆಗೆ ಹೆಚ್ಚು ಆವಕವಾಗಿದೆ. ಮಾರುಕಟ್ಟೆಗೆ ನಿರೀಕ್ಷೆಗೂ ಮೀರಿ ದಾಸ್ತಾನು ಬಂದಿರುವುದರಿಂದ ಬೆಲೆ ಇಳಿಕೆಯಾಗಿದೆ ಎಂದು ಹೇಳುತ್ತಿದ್ದಾರೆ.

ಬೆಂಬಲ ಬೆಲೆ ಘೋಷಿಸಬೇಕು : ಈ ಬಗ್ಗೆ ರೈತ ಹನುಮಂತಪ್ಪ ಅವರು ಮಾತನಾಡಿ, ಎರಡನೆ ಬೆಳೆಗೆ ಬೆಂಬಲ ಬೆಲೆ ಕುಸಿತವಾಗಿದೆ. ರೈತ ದೇಶದ ಅನ್ನದಾತ ಎಂದ ಹೇಳುತ್ತಾರೆ. ಆದರೆ ಸರ್ಕಾರಗಳು ರೈತರ ಪಕ್ಕೆಲುಬುಗಳನ್ನು ಮುರಿಯುತ್ತಿವೆ. ರಾಜ್ಯ ಸರ್ಕಾರದಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಂಡು ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖರೀದಿ ಕೇಂದ್ರವನ್ನೂ ತೆರೆದಿಲ್ಲ: ರೈತ ಶ್ರೀಧರ್ಗೌಡ ಅವರು ಮಾತನಾಡಿದ್ದು, ಬೆಳೆಗೆ ಬೆಲೆಯೂ ಇಲ್ಲ, ಖರೀದಿಗೂ ಯಾರೂ ಬರುತ್ತಿಲ್ಲ. ಬೆಳೆಯನ್ನು ಸಂರಕ್ಷಿಸುವುದಕ್ಕೂ ಆಗುತ್ತಿಲ್ಲ. ಎಕರೆಗೆ 35 ಸಾವಿರದವರೆಗೆ ಖರ್ಚು ಬರುತ್ತಿದೆ. ಎಕರೆಗೆ ಕೇವಲ 40 ಚೀಲ ಮಾತ್ರ ಬೆಳೆ ಆಗುತ್ತಿದೆ. ಸರ್ಕಾರದವರು ಖರೀದಿ ಕೇಂದ್ರ ತೆರೆಯುತ್ತೇವೆ ಎಂದು ಹೇಳುತ್ತಿದ್ದರು. ಅದನ್ನೂ ತೆರೆದಿಲ್ಲ. ಬೆಂಬಲ ಬೆಲೆ 2,300 ರೂ ಇದೆ ಎಂದು ಹೇಳುತ್ತಿದ್ದರು. ಅದೂ ಕೂಡಾ ಇಲ್ಲ. ದರ 1000 ರೂ ಕಡಿಮೆಯಾಗಿದೆ. ನಾವು ತುಂಬಾ ಕಷ್ಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *