ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ನಗರ ವ್ಯಾಪ್ತಿಯ ಜನರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ನೀರಿನ ಕರ ಹಾಗೂ ಒಳಚರಂಡಿ ಶುಲ್ಕದ ದರಗಳನ್ನು ಪರಿಷ್ಕರಿಸಲು ಅವಕಾಶವಿದೆ. 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನೀರಿನ ಕರ ಹಾಗೂ ಒಳಚರಂಡಿ ಶುಲ್ಕವನ್ನು ಪರಿಷ್ಕರಣೆ ಮಾಡಲು ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಏಪ್ರಿಲ್ 1, 2025ರಿಂದ ಜಾರಿಗೆ ಬರುವಂತೆ ದರಗಳನ್ನು ಏರಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಪರಿಷ್ಕೃತ ದರಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ ಎಂದು ಪಾಲಿಕೆಯ ಆಯುಕ್ತರು ಹೇಳಿದ್ದಾರೆ.
ನೀರಿನ ದರ ಎಷ್ಟು ಹೆಚ್ಚಳ?; ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆಯ ನೀರು ಪ್ರಸ್ತುತ ದರ ರೂ.175, ಪರಿಷ್ಕರಿಸಿದ ದರ ರೂ. 200 (ಪ್ರತಿ ತಿಂಗಳಿಗೆ). ಗೃಹೇತರ ಬಳಕೆಯ ಪ್ರಸ್ತುತ ದರ ರೂ. 400, ಪರಿಷ್ಕರಿಸಿದ ದರ ರೂ. 25 (ಪ್ರತಿ ಲೀಟರ್ಗೆ). ಮಾಲೀಕರು ಪಾಲಿಕೆಯಿಂದ ಮೀಟರ್ ಅನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು) ವಾಣಿಜ್ಯ ಬಳಕೆಯ ಪ್ರಸ್ತುತ ದರ ರೂ. 700, ಪರಿಷ್ಕರಿಸಿದ ದರ ರೂ.30 (ಪ್ರತಿ ಲೀಟರ್ಗೆ). ಮಾಲೀಕರು ಪಾಲಿಕೆಯಿಂದ ಮೀಟರ್ನ್ನು ಖರೀದಿಸಿ ಅಳವಡಿಸಿಕೊಳ್ಳತಕ್ಕದ್ದು. ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಲೀಟರ್ಗೆ ರೂ. 30ರಂತೆ ಪಡೆಯುವುದು ಎಂದು ಸಭೆ ತೀರ್ಮಾನಿಸಿದೆ. ಕೈಗಾರಿಕೆ ಬಳಕೆಯ ಪ್ರಸ್ತುತ ದರ ರೂ.700. ಪರಿಷ್ಕರಿಸಿದ ದರ ರೂ. 40 ಪ್ರತಿ ಲೀಟರ್ಗೆ. ಪಾಲಿಕೆಯ ವ್ಯಾಪ್ತಿಗೆ ಒಳಪಡದ ಪ್ರದೇಶಗಳಿಗೆ ಬಲ್ಕ್ ಮೀಟರ್ ಅಳವಡಿಸಿ ಪ್ರತಿ ಲೀಟರ್ ಗೆ ರೂ. 40 ರಂತೆ ಪಡೆಯುವುದು.
ಒಂದು ಭಾರಿ ನೀರು ಸಂಪರ್ಕಗಳಿಗೆ ವಿಧಿಸುವ ದರ. ಗೃಹ ಬಳಕೆ ಪ್ರಸ್ತುತ ದರ 5000 ರೂ., ಪರಿಷ್ಕರಿಸಿದ ದರ 6000 ರೂ.ಗಳು. ಗೃಹೇತರ ಬಳಕೆಯ ಪ್ರಸ್ತುತ ದರ 10,000 ರೂ.ಗಳು. ಪರಿಷ್ಕರಿಸಿದ ದರ 15,000 ರೂ.ಗಳು. ವಾಣಿಜ್ಯ/ ಕೈಗಾರಿಕೆಯ ಪ್ರಸ್ತುತ ದರ 10,000 ರೂ., ಪರಿಷ್ಕರಿಸಿದ ದರ 25,000 ರೂ.ಗಳು. ಒಳಚರಂಡಿ ಶುಲ್ಕದ ದರ: ಗೃಹ ಬಳಕೆಯ ಪ್ರತಿ ಬೇಸಿನ್ಗೆ ಪ್ರಸ್ತುತ ದರ 35 ರೂ., ಪರಿಷ್ಕರಿಸಿದ ದರ 50 ರೂ. (ಪ್ರತಿ ಬೇಸಿನ್/ ತಿಂಗಳು). ಲಾಡ್ಜಿಂಗ್, ಬೋರ್ಡಿಂಗ್/ ಅಪಾರ್ಟ್ಮೆಂಟ್ ಹಾಗೂ ಇನ್ನಿತರೆ ಬಹುಮಹಡಿ ಕಟ್ಟಡಗಳ ಪ್ರತಿ ಬೇಸಿನ್ಗೆ ಪ್ರಸ್ತುತ ದರ 35 ರೂ., ಪರಿಷ್ಕರಿಸಿದ ದರ 100 ರೂ. (ಪ್ರತಿ ಬೇಸಿನ್/ ತಿಂಗಳು). ಹೋಟೆಲ್/ ರೆಸ್ಟೋರೆಂಟ್ಗೆ ಪ್ರಸ್ತುತ ದರ 35 ರೂ., ಪರಿಷ್ಕರಿಸಿದ ದರ 2,500 ರೂ. (ಪ್ರತಿ ಬೇಸಿನ್/ ತಿಂಗಳು). ಒಂದು ಬಾರಿ ಒಳಚರಂಡಿ ಸಂಪರ್ಕಗಳಿಗೆ ವಿಧಿಸುವ ದರ. ಗೃಹ ಬಳಕೆಗೆ ಪ್ರಸ್ತುತ ದರ 500 ರೂ.ಗಳು, ಪರಿಷ್ಕರಿಸಿದ ದರ 3000 ರೂ.ಗಳು. ಲಾಡ್ಜಿಂಗ್ ಮತ್ತು ಬೋರ್ಡಿಂಗ್ನ ಪ್ರಸ್ತುತ ದರ 1,000, ಪರಿಷ್ಕರಿಸಿದ ದರ 15,000 ರೂ.ಗಳು. ಹೋಟಲ್/ ರೆಸ್ಟೋರೆಂಟ್ ಪ್ರಸ್ತುತ ದರ 1,000, ಪರಿಷ್ಕರಿಸಿದ ದರ 20,000 ರೂ.ಗಳು.
ಸಾರ್ವಜನಿಕರು ನಿಗದಿತ ಅವಧಿಯಲ್ಲಿ ನೀರಿನ ಕರ ಹಾಗೂ ಒಳಚರಂಡಿ ಶುಲ್ಕವನ್ನು ಪಾವತಿಸಿ ಪಾಲಿಕೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಾಲಿಕೆಯ ಆಯುಕ್ತರು ಮನವಿ ಮಾಡಿದ್ದಾರೆ.