ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಿಕೊಂಡಿರುವ ಆರೋಪದಡಿ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ (ED) ದಾಳಿ ನಡೆಸಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದಿದೆ.

ನಾಗೇಂದ್ರ ಪಿಎ ವಿಜಯ್ ಕುಮಾರ್ ಗೌಡಗೆ ಎಲೆಕ್ಷನ್ ಹಣ ಹಂಚುವ ಹೊಣೆ ವಹಿಸಲಾಗಿತ್ತು ಅನ್ನೋದು ಇಡಿ ತನಿಖೆಯಲ್ಲಿ ಗೊತ್ತಾಗಿತ್ತು. ಈ ಬಗ್ಗೆ ವಿಜಯ್ ಕುಮಾರ್ ಗೌಡ ಕೂಡ ಇಡಿಗೆ ಹೇಳಿಕೆ ಕೊಟ್ಟಿದ್ದಾರೆ. ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಂಚಿರುವುದಾಗಿ ವಿಜಯ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ವಿಜಯ್ ಕುಮಾರ್ ಮೊಬೈಲ್ ಫೋನ್‌ನಲ್ಲಿ ಕಂತೆ ಕಂತೆ ಹಣದ ಫೋಟೋ ಕೂಡ ಪತ್ತೆಯಾಗಿದೆ.

ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಯಾವಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂಬ ಪಟ್ಟಿಯೂ ಮೊಬೈಲ್‌ನಲ್ಲಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಪರ ಮತದಾರರಿಗೆ ಹಣ ಹಂಚಲಾಗಿದೆ ಎಂಬ ಗಂಭೀರ ಆರೋಪವನ್ನು ಇಡಿ ಮಾಡಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.