ಬೆಳ್ತಂಗಡಿ(ದಕ್ಷಿಣ ಕನ್ನಡ): ಶ್ರೀ ಗೋಪಾಲಕೃಷ್ಣ ದೇವಸ್ಥಾನ ಭಟ್ರಬೈಲು ತೆಕ್ಕಾರು ಇಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ವೇದಿಕೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು “ಗ್ರಾಮದ ಮುಸ್ಲಿಮರ ಬಗ್ಗೆ ಮಾನಹಾನಿಕಾರ ಮತ್ತು ಕೋಮು ಪ್ರಚೋದನೆಯಿಂದ ಕೂಡಿದ ದ್ಷೇಷ ಭಾಷಣ ಮಾಡಿದ್ದಾರೆ” ಎಂದು ಆರೋಪಿಸಿ, ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ದೂರಿನಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ಜರುಗಿತು. ಕಾರ್ಯಕ್ರಮದಲ್ಲಿ ಹರೀಶ್ ಪೂಂಜಾ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
“ದೇವಾಲಯದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಸ್ಲಿಂ ಮಸೀದಿಗಳಿಗೆ ಏಕೆ ನೀಡಿದ್ದೀರಿ? ನಮಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ನೀವು ಮುಸ್ಲಿಮರಿಗೆ ಆಹ್ವಾನ ಪತ್ರಿಕೆ ನೀಡಿದ್ದರಿಂದಲೇ ಅವರು ಟ್ಯೂಬ್ಲೈಟ್ ಒಡೆದಿದ್ದಾರೆ” ಎಂದು ಹರೀಶ್ ಪೂಂಜಾ ಹೇಳಿರುವುದಾಗಿ ಆರೋಪಿಸಲಾಗಿದೆ.
ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ ಶಾಸಕ ಹರೀಶ್ ಪೂಂಜಾ ಅವರು ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಸ್ಥಳೀಯ ಮುಸ್ಲಿಂ ಮುಖಂಡ ಎಸ್ಎಂಎಸ್ ಇಬ್ರಾಹಿಂ ಮುಸ್ಲಿಯಾರ್ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

