ಬೆಂಗಳೂರು: ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಅಪರಾಧಗಳ ಕುರಿತ ದೂರು ದಾಖಲಿಸುವಿಕೆ, ಮೇಲ್ವಿಚರಣೆಯಂತಹ ಕಾರ್ಯ ಚಟುವಟಿಕೆಗಳ ಸರಳೀಕರಣಕ್ಕೆ ಸರ್ಕಾರ ‘ಗರುಡಾಕ್ಷಿ’ (Garudakshi) ತಂತ್ರಾಂಶ ಜಾರಿಗೆ ತಂದಿದೆ. ಈ ತಂತ್ರಾಂಶ ಜಾರಿಗೆ ತಂದು ಕೇವಲ 15 ದಿನಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಅರಣ್ಯ ಪೊಲೀಸರಿಗೂ ಈ ತಂತ್ರಾಂಶದಿಂದ ಹೆಚ್ಚು ಸಹಾಯವಾಗುತ್ತಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಗೆ ಮಹತ್ವದ ‘ಗರುಡಾಕ್ಷಿ’ ತಂತ್ರಾಂಶವನ್ನು ಜನವರಿ 08ರಂದು ಲೋಕಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಈವರೆಗೆ ಅರಣ್ಯ ಇಲಾಖೆ, ವನ್ಯಜೀವಿಗಳ ರಕ್ಷಣೆ ಇನ್ನಿತರ ಅಪರಾಧ ಪ್ರಕರಣಗಳಿಗೆ ಕುರಿತಂತೆ ಒಟ್ಟು 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇದೊಂದು ಎಫ್ಐಆರ್ ವ್ಯವಸ್ಥೆಯೂ ಆಗಿದ್ದು, ಇಲಾಖೆಯಡಿ ದಾಖಲಾಗುವ ದೂರುಗಳ ಸರಳೀಕರಣಗೊಳಿಸಲು, ಅದನ್ನು ಸೂಕ್ತವಾಗಿ ಮೇಲ್ವಿಚಾರಣೆ ಮಾಡಲು ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗುತ್ತದೆ. ಎಫ್ಐಆರ್ ಅನ್ನು ಡಿಜಿಟಲೀಕರಣಗೊಳಿಸಲು ಜಾಲತಾಣ ಅನುಷ್ಠಾನಕ್ಕೆ ತರಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಯು ಈ ವ್ಯವಸ್ಥೆ ಬಳಕೆಗೆ ಬಂದ ಮೇಲೆ ಅರಣ್ಯ ಮತ್ತು ವನ್ಯಜೀವಿ ಕಾನೂನುಗಳಡಿ ಅರಣ್ಯ ಅಪರಾಧ ಪ್ರಕರಣಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು, ಸೂಕ್ತ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈಗಾಗಲೇ ಇಂತಹ ವ್ಯವಸ್ಥೆ ರಾಜ್ಯ ಪೊಲೀಸ್ ಇಲಾಖೆಯಲ್ಲಿದೆ. ಅದೇ ಮಾದರಿಯನ್ನು ಈಗ ಈ ಇಲಾಖೆಯಲ್ಲೂ ಅಳವಡಿಸಲಾಗಿದೆ. ಐದು ಕಡೆ ಮಾತ್ರವೇ ‘ಗರುಡಾಕ್ಷಿ’ ಆರಂಭ ಸದ್ಯ ಈ ವ್ಯವಸ್ಥೆಯನ್ನು ರಾಜ್ಯ ಅರಣ್ಯ ಇಲಾಖೆಯ ಎಲ್ಲ ವಿಭಾಗಗಳಲ್ಲಿ ಜಾರಿಗೆ ತಂದಿಲ್ಲ. ಬದಲಾಗಿ ಪ್ರಾಯೋಗಿಕ ಹಂತವೆಂಬಂತೆ ಐದು ಕಡೆಗಳಲ್ಲಿ ‘ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ’, ಭದ್ರಾವತಿ ವಿಭಾಗ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ ಮತ್ತು ಶಿರಸಿ ವಿಭಾಗದಲ್ಲಿ ಮಾತ್ರವೇ ತಂತ್ರಾಂಶ ಸೇವೆ ಆರಂಭಿಸಲಾಗಿದೆ.
ಸಾರ್ವಜನಿಕರು ನಿಮ್ಮ ಹತ್ತಿರದ ಅರಣ್ಯ ವ್ಯಾಪ್ತಿಯಲ್ಲಿ ಅತಿಕ್ರಮ, ವನ್ಯಜೀವಿಗಳಿಗೆ ತೊಂದರೆ, ವನ್ಯಜೀವಿ ಭೇಟಿ (ಕಳ್ಳಭೇಟೆ), ಅಕ್ರಮ ಮರ ಕಡಿತ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ವಿರುದ್ಧ ಆನ್ಲೈನ್ನಲ್ಲಿ ದೂರು ನೀಡಲು ಮತ್ತು ದೂರು ದಾಖಲಿಸಬಹುದಾಗಿದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಎರಡೇ ವಾರದಲ್ಲಿ 40ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು. ಈ ಪೈಕಿ ಮಲೆಮಹದೇಶ್ವರ ಬೆಟ್ಟದ ವಿಭಾಗ ವ್ಯಾಪ್ತಿಯಲ್ಲಿ ಅತೀ ಹೆಚ್ಚು 12 ಕೇಸುಗಳು ಇದೇ ತಂತ್ರಾಂಶದಡಿ ದಾಖಲಾಗಿವೆ. ಉಳಿದಂತೆ ಭದ್ರಾವತಿ, ಶಿರಸಿ ಅರಣ್ಯ ವಿಭಾಗದಲ್ಲಿ ತಲಾ 10 ಕೇಸುಗಳು, ಬೆಂಗಳೂರು ನಗರ ವಿಭಾಗ, ಅರಣ್ಯ ಸಂಚಾರಿ ದಳದಲ್ಲಿ 2 ಎಫ್ಐಆರ್ ದಾಖಲಾಗಿವೆ.