ಬೆಂಗಳೂರು: ಉದ್ಯಾನ ನಗರಿ ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗಿದೆ. ಏಳು ಜನರ ವಿರುದ್ಧದ ಅಪರಾಧ ಸಾಬೀತಾಗಿದೆ. ಬಿಜೆಪಿ ನಾಯಕಿ, ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಕಛೇರಿ ಮುಂದೆಯೇ 2021ರಲ್ಲಿ ಹತ್ಯೆ ಮಾಡಲಾಗಿತ್ತು. ರೇಖಾ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು.
ಬಿಜೆಪಿ ನಾಯಕಿ, ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ 7 ಜನರ ವಿರುದ್ಧದ ಅಪರಾಧ ಸಾಬೀತಾಗಿದೆ. ಬೆಂಗಳೂರು ನಗರದ 72ನೇ ಸಿಸಿಎಚ್ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ದಂಡವನ್ನು ವಿಧಿಸಿ ಆದೇಶಿಸಿದೆ.
ನಗರದ ಅಂಜನಪ್ಪ ಗಾರ್ಡನ್ ನಿವಾಸಿ ರೇಖಾ ಕದಿರೇಶ್ 2021ರ ಜೂನ್ನಲ್ಲಿ ಕಛೇರಿ ಮುಂದೆಯೇ ಹತ್ಯೆಯಾಗಿದ್ದರು. ಪೀಟರ್, ಸೂರಜ್, ಸ್ಟೀಫನ್, ಪುರುಷೋತ್ತಮ, ಅಜಯ್, ಅರುಣ್ ಕುಮಾರ್ ಮತ್ತು ಸೆಲ್ವರಾಜ್ಗೆ ಜೀವಾಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಆರೋಪಿ ಮಾಲಾ ವಿಚಾರಣೆ ವೇಳೆ ಮೃತಪಟ್ಟಿದ್ದರು.
ಪತಿ, ಪತ್ನಿ ಇಬ್ಬರೂ ಕೊಲೆ: 8 ಮಂದಿ ಸೇರಿ ಸಂಚು ರೂಪಿಸಿ ರೇಖಾ ಅವರನ್ನು 2021ರಲ್ಲಿ ಹತ್ಯೆ ಮಾಡಿದ್ದರು. 2018ರಲ್ಲಿ ಅವರ ಪತಿ ಕದಿರೇಶ್ ಹತ್ಯೆ ನಡೆದಿತ್ತು. ರೇಖಾ ಕದಿರೇಶ್ ಹತ್ಯೆ ಪ್ರಕರಣ ಸಂಬಂಧ 2021ರ ಸೆಪ್ಟೆಂಬರ್ನಲ್ಲಿ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಾಟನ್ ಪೇಟೆ ಪೊಲೀಸರು 780 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
2018ರಲ್ಲಿ ಕದಿರೇಶ್ ಹತ್ಯೆಯಾಗಿತ್ತು. ಬಳಿಕ ಪ್ರತ್ಯೇಕವಾಗಿ ವಾಸವಾಗಿದ್ದ ರೇಖಾ ಪತಿ ಕುಟುಂಬದವರನ್ನು ರಾಜಕೀಯವಾಗಿ ದೂರವಿಟ್ಟಿದ್ದರು. ಇದರಿಂದಾಗಿ ಕದಿರೇಶ್ ಸಹೋದರಿ ಮಾಲಾ ಮತ್ತು ಸಂಬಂಧಿಕರು ಅಸಮಾಧಾನಗೊಂಡಿದ್ದರು. ಅಲ್ಲದೇ ಕದಿರೇಶ್ ಜೊತೆ ಇದ್ದ ಪೀಟರ್ ಅವರನ್ನು ರೇಖಾ ದೂರ ಮಾಡಲು ಪ್ರಯತ್ನ ಮಾಡುತ್ತಿದ್ದರು. ಮಾಲಾ ತನ್ನ ಸಹೋದರನ ರಾಜಕೀಯ ಶಕ್ತಿಯನ್ನು ರೇಖಾ ಒಬ್ಬಳೇ ಬಳಕೆ ಮಾಡಿಕೊಂಡು ರಾಜಕೀಯವಾಗಿ ಬೆಳೆಯುತ್ತಿದ್ದಾಳೆ ಎಂದು ಅಸಮಾಧಾನಗೊಂಡು ಆಕೆಯ ಕೊಲೆಗೆ ಸಂಚು ರೂಪಿಸಿದ್ದಳು. ಇದಕ್ಕಾಗಿ ಆಕೆ ಕದಿರೇಶ್ ಜೊತೆ ಓಡಾಡಿಕೊಂಡಿದ್ದ ಪೀಟರ್ ಸಂಪರ್ಕ ಮಾಡಿದ್ದಳು. ರೇಖಾ ತಮ್ಮನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿರುವ ಕುರಿತು ಅಸಮಾಧಾನ ಹೊಂದಿದ್ದ ಪೀಟರ್ ಕೊಲೆಗೆ ಒಪ್ಪಿದ್ದ. ಇತರ ಆರೋಪಿಗಳ ಜೊತೆ ಸೇರಿ 2021ರಲ್ಲಿ ತಮ್ಮ ಕಛೇರಿಯ ಮುಂಭಾಗದಲ್ಲಿಯೇ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣ ಬೆಂಗಳೂರು ನಗರದ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಕೊಲೆಯಾದ 24 ಗಂಟೆಗಳಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಮಾಲಾ ಮತ್ತು ಆಕೆಯ ಪುತ್ರ ಅರುಣ್ ಕುಮಾರ್ ಆರೋಪಿಗಳಾಗಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾಲಾ ವಿಚಾರಣೆ ವೇಳೆ ಮೃತಪಟ್ಟಿದ್ದರು. ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ಅಪರಾಧ ಸಾಬೀತಾಗಿದೆ. ಏಳು ಜನರಲ್ಲಿ ಮೂವರು ಷರತ್ತು ಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು.