ಬೆಂಗಳೂರು: ಎರಡನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆೆಗೆ ಶರಣಾದ ಘಟನೆ ಗುರುವಾರ ರಾತ್ರಿ ಮಂತ್ರಿಮಾಲ್ನಲ್ಲಿ ನಡೆದಿದೆ. ಟಿ.ಸಿ ಮಂಜುನಾಥ್ (55) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ತುಮಕೂರು ಜಿಲ್ಲೆಯ ತಿಪಟೂರು ಮೂಲದ ಮಂಜುನಾಥ್, ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿದ್ದರು. ಗುರುವಾರ ಸಂಜೆ ಮಂತ್ರಿಮಾಲ್ಗೆ ಬಂದಿರುವ ಮಂಜುನಾಥ್, ರಾತ್ರಿ 9 ಗಂಟೆ ಸುಮಾರಿಗೆ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ಇವರು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
“ಬ್ಯಾಂಕ್ ಸೇರಿದಂತೆ ವಿವಿಧೆಡೆ 2 ಕೋಟಿಯಷ್ಟು ಸಾಲವಿದೆ. ಸಾಲವನ್ನ ತೀರಿಸಲು ಸಾಧ್ಯವಾಗುತ್ತಿಲ್ಲ” ಎಂದು ಡೆತ್ ನೋಟ್ ಬರೆದು, ಜೊತೆಗೆ ತಮ್ಮ ಸಾವಿನ ಬಳಿಕ ಸಂಪರ್ಕಿಸಬೇಕಾದವರ ಹೆಸರು ಹಾಗೂ ನಂಬರ್ಗಳನ್ನ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಲ್ಲೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.