ಬೆಂಗಳೂರು: ನವಗ್ರಹ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದ ನಟ ಗಿರಿ ದಿನೇಶ್ ಅವರು ಶನಿವಾರ ನಿಧನರಾಗಿದ್ದಾರೆ.
ಗಿರಿ ದಿನೇಶ್ ಅವರು ನವಗ್ರಹ ಸಿನಿಮಾದ ಮೂಲಕ ಖ್ಯಾತಿಯನ್ನು ಗಳಿಸಿದ್ದರು. ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬದಿದೆ. ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ವರದಿಯಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ.
ಗಿರಿ ದಿನೇಶ್ ಅವರು ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು.
ನವಗ್ರಹ ಸಿನಿಮಾವನ್ನು ದರ್ಶನ್ ಅವರ ಸೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಮೈಸೂರು ದಸರಾದ ಚಿನ್ನದ ಅಂಬಾರಿಯನ್ನು ಕದಿಯುವ ಕಥಾ ಹಂದರ ಹೊಂದಿದ್ದ ಈ ಸಿನಿಮಾದಲ್ಲಿ ಕಳ್ಳರ ಗುಂಪಿನ ಪಾತ್ರವನ್ನು ದಿನೇಶ್ ನಿಭಾಯಿಸಿದ್ದರು.
ದರ್ಶನ್ ಜೊತೆ ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ನಾಗೇಂದ್ರ ಅರಸ್, ವರ್ಷಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದರು.