ಬೆಂಗಳೂರು || ಬೆಂಗಳೂರಲ್ಲಿ ರೈಲ್ವೆ ಬೈಪಾಸ್ ನಿರ್ಮಾಣಕ್ಕೆ ಒಪ್ಪಿಗೆ, ಮಾರ್ಗದ ವಿವರ

ಬೆಂಗಳೂರು || ಬೆಂಗಳೂರಲ್ಲಿ ರೈಲ್ವೆ ಬೈಪಾಸ್ ನಿರ್ಮಾಣಕ್ಕೆ ಒಪ್ಪಿಗೆ, ಮಾರ್ಗದ ವಿವರ

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಷ್ಟಪಥದ ಪೆರಿಫೆರಲ್ ವರ್ತುಲ ರಸ್ತೆ ಸೇರಿ ವಿವಿಧ ಯೋಜನೆ ರೂಪಿಸಲಾಗಿದೆ. ಆದರೆ ರೈಲುಗಳ ಸಂಚಾರ ದಟ್ಟಣೆ ಮಾಡಲು, ರೈಲು ನಿಲ್ದಾಣದ ಮೇಲಿನ ಪ್ರಯಾಣಿಕರ ಒತ್ತಡ ತಗ್ಗಿಸಲು ಯೋಜನೆ ಏನು?. ನಗರದಲ್ಲಿರುವ ರಸ್ತೆ ಬೈಪಾಸ್ ಮಾದರಿಯಲ್ಲಿಯೇ ರೈಲ್ವೆ ಬೈಪಾಸ್ ನಿರ್ಮಾಣ ಯೋಜನೆಗೆ ಈಗ ಒಪ್ಪಿಗೆ ಸಿಕ್ಕಿದೆ.

ನಗರದಲ್ಲಿ ಈಗಿರುವ ರೈಲುಗಳ ಸಂಚಾರ ಒತ್ತಡ ಕಡಿಮೆ ಮಾಡಲು, ಸರಕು ಸಾಗಣೆ ರೈಲುಗಳು ಸಾರಾಗವಾಗಿ ಸಂಚಾರ ನಡೆಸಲು ಅನುಕೂಲವಾಗುವಂತೆ 6.14 ಕಿ. ಮೀ. ಬೈಪಾಸ್ ನಿರ್ಮಾಣ ಮಾಡಲಾಗುತ್ತದೆ. ಇದು ಸುಮಾರು 248 ಕೋಟಿ ರೂ.ಗಳ ಯೋಜನೆಯಾಗಿದ್ದು, ರೈಲ್ವೆ ಮಂಡಳಿ ಈ ಯೋಜನೆಗೆ ಈಗಾಗಲೇ ಅಂತಿಮ ಒಪ್ಪಿಗೆ ಕೊಟ್ಟಿದೆ.

ಅಲ್ಲದೇ ಈಗಾಗಲೇ ಕರ್ನಾಟಕ ಸರ್ಕಾರ ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸುತ್ತಿದೆ. ಈ ರೈಲ್ವೆ ಬೈಪಾಸ್ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಸಹ ಸಂಪರ್ಕ ಕಲ್ಪಿಸುವಂತೆ ನಿರ್ಮಾಣವಾಗಲಿದೆ.

ಯೋಜನೆಯ ವಿವರಗಳು: ಬೆಂಗಳೂರು ನಗರದ ರೈಲ್ವೆ ಬೈಪಾಸ್ (ಕಾರ್ಡ್ ಲೈನ್) ಹಲಸೂರು-ರಾಜಾನಕುಂಟೆ ನಡುವೆ ನಿರ್ಮಾಣವಾಗಲಿದೆ. ಈ 6.14 ಕಿ. ಮೀ. ಬೈಪಾಸ್ ಮೂಲಕ ಹಲವು ಸರಕು ಸಾಗಣೆ ರೈಲು, ಪ್ರಯಾಣಿಕ ರೈಲು ಸಂಚಾರ ನಡೆಸುವುದರಿಂದ ನಗರದೊಳಗಿರುವ ರೈಲು ನಿಲ್ದಾಣದ ಮೇಲೆ ಒತ್ತಡ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

2022ರಲ್ಲಿ ಈ ಬೈಪಾಸ್ ಜೋಡಿ ಹಳಿ ಮಾರ್ಗ ನಿರ್ಮಾಣಕ್ಕೆ ನೈಋತ್ಯ ರೈಲ್ವೆ ಸಮೀಕ್ಷೆ ನಡೆಸಿತ್ತು. ಕಾರ್ಯ ಸಾಧ್ಯತಾ ವರದಿ ತಯಾರು ಮಾಡಿತ್ತು. ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆಗ 2024ರ ಡಿಸೆಂಬರ್ ವೇಳೆಗೆ ಬೈಪಾಸ್ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಈಗ ಬೈಪಾಸ್ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದೆ. ಈಗ ಬೈಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ರೈಲ್ವೆ ಮಂಡಳಿ ಒಂದು ಹಳಿಯ ಮಾರ್ಗ ನಿರ್ಮಿಸಬೇಕು ಎಂದು ಹೇಳಿದೆ. ಅಲ್ಲದೇ ಸಿವಿಲ್ ಕಾಮಗಾರಿಗೆ 213.46 ಕೋಟಿ, ಸಿಗ್ನಲ್ ಕಾಮಗಾರಿಗೆ 21.14 ಕೋಟಿ, ಎಲೆಕ್ಟ್ರಿಕ್ ಕಾಮಗಾರಿಗೆ 13 ಕೋಟಿ, ಸೇರಿ 248.24 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಬೆಂಗಳೂರು ನಗರದ ಈ ಬೈಪಾಸ್ ಸರಕು ಸಾಗಣೆ ರೈಲುಗಳ ಸಂಚಾರಕ್ಕೆ ಸಹಕಾರಿ ಎಂದು ಅಂದಾಜಿಸಲಾಗಿದೆ. ನಗರದಲ್ಲಿ ಈಗ ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಬೈಪಾಸ್ ನಿರ್ಮಾಣವಾದರೆ ಚೆನ್ನೈ ಬಂದರು ಮೂಲಕ ಬರುವ ರೈಲುಗಳು, ಹೋಗುವ ರೈಲುಗಳು ಸಂಚಾರ ನಡೆಸಬಹುದು. ಆಗ ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ರೈಲುಗಳಿಗೆ ಆದ್ಯತೆ ಸಿಗಲಿದೆ.

ಚೆನ್ನೈಕಡೆಯಿಂದ ಬಳ್ಳಾರಿ, ಧರ್ಮಾವರಂ, ಹಿಂದುಪುರ, ಗೌರಿಬಿದನೂರು, ದೊಡ್ಡಬಳ್ಳಾಪುರ, ರಾಜನಕುಂಟೆ ಕಡೆಯಿಂದ ಬೆಟ್ಟಹಲಸೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಚಿಂತಾಮಣಿ ಕಡೆಗೆ ಸುಲಭವಾಗಿ ಸಂಚಾರ ನಡೆಸಬಹುದು. ಆಗ ಯಲಹಂಕ, ಕೆಆರ್ ಪುರ ಮೂಲಕ ನಗರಕ್ಕೆ ಬರುವ ಪ್ರಯಾಣಿಕ ರೈಲುಗಳು ಮಾರ್ಗದಲ್ಲಿ ವಿಳಂಬವಾಗುವುದು. ಗೂಡ್ಸ್ ರೈಲು ಹೋಗುವ ತನಕ ಕಾಯುವುದು ತಪ್ಪಲಿದೆ. ಕೋಲಾರ-ಬೆಂಗಳೂರು, ಕಂಟೋನ್ಮೆಂಟ್-ಕೋಲಾರ ಮುಂತಾದ ಮಾರ್ಗದ ರೈಲುಗಳ ಸಂಚಾರವೂ ವೇಗವಾಗಲಿದೆ. ಈ ರೈಲ್ವೆ ಬೈಪಾಸ್ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಹೀಲಲಿಗೆ-ರಾಜಾನಕುಂಟೆ ಕಾರಿಡಾರ್ಗೆ ಸಂಪರ್ಕ ಕಲ್ಪಿಸುವಂತೆ ನಿರ್ಮಾಣ ಮಾಡಲಾಗುತ್ತದೆ. ಆಗ ಪ್ರಯಾಣಿಕರು ಇಂಟರ್ ಚೇಂಜ್ ನಿಲ್ದಾಣದ ಮೂಲಕ ಬೆಂಗಳೂರು ನಗರಕ್ಕೆ ಬರುವುದು, ಹೋಗುವುದಕ್ಕೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *