ಬೆಂಗಳೂರು || ಆಟೋ ದರ ಏರಿಕೆ ಶಾಕ್ : ಕನಿಷ್ಠ ದರ 36 ರೂ

ಬೆಂಗಳೂರು: ಈಗಾಗಲೇ ಬಸ್ ಟಿಕೆಟ್‌, ಮೆಟ್ರೋ ದರ ಏರಿಕೆಯಿಂದಾಗಿ ಕಂಗೆಟ್ಟಿರುವ ಬೆಂಗಳೂರಿಗರಿಗೆ (Bengaluru) ಈಗ ಆಟೋ ದರ್‌ ಏರಿಕೆ ಶಾಕ್‌ ಕೊಡಲಾಗಿದೆ. ಮುಂದಿನ ಆಗಸ್ಟ್‌ 1 ರಿಂದಲೇ ಹೊಸ ದರ ಅನ್ವಯವಾಗಲಿದೆ.

ಸದ್ಯ ಬೆಂಗಳೂರಿನಲ್ಲಿ ಆಟೋದ ಕನಿಷ್ಠ ದರ ಈಗ 30 ರೂಪಾಯಿ ಇದೆ. ಪ್ರತಿ ಕಿಲೋಮೀಟರ್‌ಗೆ 15 ರೂಪಾಯಿ ದರ ಇದೆ. ಆದರೆ, ಹೊಸ ದರ 36 ರೂಪಾಯಿಗೆ ಏರಿಕೆಯಾಗಿದೆ. ಮೊದಲ 2 ಕಿಮೀಗೆ 36 ರೂಪಾಯಿ ಇರಲಿದ್ದು, ನಂತರ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಒಂದು ಟ್ರಿಪ್‌ನಲ್ಲಿ ಮೂರು ಜನ ಮಾತ್ರ ಪ್ರಯಾಣ ಮಾಡಬಹುದಾಗಿದೆ

ಅಲ್ಲದೇ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ಒನ್ ಅಂಡ್ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಮಾಡಬಹುದಾಗಿದೆ. ಜೊತೆಗೆ ವೇಯ್ಟಿಂಗ್‌ ಚಾರ್ಜ್‌ (ಕಾಯುವಿಕೆ ದರ) ಮೊದಲ ಐದು ನಿಮಿಷ ಉಚಿತ ಇರಲಿದೆ. 5 ನಿಮಿಷಗಳ ನಂತರ ಪ್ರತಿ 15 ನಿಮಿಷ ಅಥವಾ ಅರ್ಧ ಭಾಗಕ್ಕೆ 10 ರೂ., ಲಗೇಜ್‌ ದರ ಮೊದಲ 20 ಕೆಜಿಗೆ ಉಚಿತ ಇರಲಿದೆ. 20 ಕೆಜಿ ಮೇಲ್ಪಟ್ಟ ತೂಕದ ಲಗೇಜ್‌ಗೆ 10 ರೂ. ಹೆಚ್ಚುವರಿ ದರ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆಜಿಗೆ 10 ರೂಪಾಯಿ ನಿಗದಿ ಮಾಡಲಾಗಿದೆ.

ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

Leave a Reply

Your email address will not be published. Required fields are marked *