ಬೆಂಗಳೂರು || ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಅಭಿಯಾನ

ಬೆಂಗಳೂರು || ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಅಭಿಯಾನ

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಸೇವನೆಯ ಅಪಾಯಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮತ್ತು ಹುಕ್ಕಾ ನಿಷೇಧದ ಕುರಿತು ಜಾಗೃತಿ ಮೂಡಿಸಲು ಆಟೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿರುವ ಬ್ಲೂಮ್ಬರ್ಗ್ ಫಿಲಾಂತ್ರಪೀಸ್ ಬೆಂಬಲಿತ ಆರೋಗ್ಯಕರ ನಗರಗಳ ಪಾಲುದಾರಿಕೆಯೊಂದಿಗೆ(Partnership for Healthy cities) ಸ್ಟ್ರಾಟಜೀಸ್ನ ಸಹಭಾಗಿತ್ವದಲ್ಲಿ ತಂಬಾಕಿನ ಹಾನಿಕಾರಕ ಪರಿಣಾಮಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಯ ಅಪಾಯಗಳು ಮತ್ತು ಹುಕ್ಕಾ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲು ನಗರದಾದ್ಯಂತ ಆಟೋ ಅಭಿಯಾನವನ್ನು ಆರಂಭಿಸಿದೆ.

ಈ ಉಪಕ್ರಮದ ಭಾಗವಾಗಿ 16 ಬ್ರಾಂಡ್ ಆಟೋರಿಕ್ಷಾಗಳು ನಗರದ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸಲಿದ್ದು, ತಂಬಾಕು ಸಂಬಂಧಿತ ಹಾನಿಗಳು ಮತ್ತು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮೊದಲೇ ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಪ್ರಸಾರ ಮಾಡುತ್ತವೆ. ಒಂದು ವಾರದವರೆಗೆ ನಡೆಯಲಿರುವ ಈ ಅಭಿಯಾನವು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಬಲಗೊಳಿಸಲು ಮತ್ತು ಆರೋಗ್ಯಕರ ಬೆಂಗಳೂರನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

 ನಮ್ಮ ಮಕ್ಕಳು, ನಮ್ಮ ಭವಿಷ್ಯ ಮತ್ತು ತಂಬಾಕಿನ ಅಪಾಯಗಳಿಂದ ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಅಭಿಯಾನವು ಸಾರ್ವಜನಿಕರಿಗೆ ಧೂಮಪಾನದಿಂದ ಆರೋಗ್ಯದ ಮೇಲಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಹುಕ್ಕಾ ಮತ್ತು ಇ-ಸಿಗರೇಟ್ಗಳ ನಿಷೇಧವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ ಮತ್ತು ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಉತ್ತೇಜಿಸುತ್ತದೆ ಎಂದರು.

ಆರೋಗ್ಯಕರ ನಗರಗಳ ಪಾಲುದಾರಿಕೆ – ಸ್ಮೋಕ್ ಫ್ರೀ ಬೆಂಗಳೂರು ಉಪಕ್ರಮದ ಯೋಜನಾ ನಿರ್ದೇಶಕಿ ಡಾ. ತ್ರಿವೇಣಿ ಬಿ ಎಸ್ ರವರು ಮಾತನಾಡಿ, ಬಿಬಿಎಂಪಿಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ಯುವ ಜನತೆಯನ್ನು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವ ಮತ್ತು ಸಾರ್ವಜನಿಕ ಸ್ಥಳಗಳು ಧೂಮಪಾನದ ಹೊಗೆ ಮುಕ್ತವಾಗಿರುವುದನ್ನು

ಖಾತ್ರಿಪಡಿಸಿಕೊಳ್ಳುವ ಬೆಂಗಳೂರಿನ ಬದ್ಧತೆಯನ್ನು ನಾವು ಬಲಪಡಿಸುತ್ತಿದ್ದೇವೆ ಎಂದು ಹೇಳಿದರು.

ನಗರದಲ್ಲಿ ತಂಬಾಕು ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳೊಂದಿಗೆ ಹೆಚ್ಚಿನ ಸಾರ್ವಜನಿಕ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಉಪಕ್ರಮವು ಒಂದು ಮಹತ್ವದ ಹೆಜ್ಜೆಯಾಗಿದೆ. ಬಿಬಿಎಂಪಿ ಎಲ್ಲಾ ನಾಗರಿಕರು ಈ ಉಪಕ್ರಮವನ್ನು ಬೆಂಬಲಿಸಬೇಕು ಮತ್ತು ಆರೋಗ್ಯಕರ, ಧೂಮಪಾನದ ಹೊಗೆ ಮುಕ್ತ ಬೆಂಗಳೂರನ್ನು ನಿರ್ಮಿಸಲು ಕೊಡುಗೆ ನೀಡಬೇಕೆಂದು ಆಗ್ರಹಿಸುತ್ತದೆ.

ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದಿನಿ, ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಡಾ. ಕುಮಾರ್, ವಲಯ ಆರೋಗ್ಯ ಅಧಿಕಾರಿ, ವೈದ್ಯಕೀಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು.

Leave a Reply

Your email address will not be published. Required fields are marked *