ಬೆಂಗಳೂರು: ಬೆಂಗಳೂರಲ್ಲಿ ಇ – ಖಾತಾ ವ್ಯವಸ್ಥೆಯಲ್ಲಿ ಗೊಂದಲ ಆಗಿರುವ ಬಗ್ಗೆ ಕೆಲವು ದೂರುಗಳು ಕೇಳಿ ಬರುತ್ತಿವೆ. ಕೆಲವು ದಿನಗಳ ಹಿಂದೆ ಬಿಬಿಎಂಪಿ ಇ – ಖಾತಾ ಮಾಡಿಸಿಕೊಳ್ಳಲು ಬಿಬಿಎಂಪಿಯ ಕೆಲವು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಖಾತಾ ಇಲ್ಲದ ಹೊಸ ಆಸ್ತಿಗಳಿಗೆ ಹೊಸ ಮಾಡೆಲ್ ಪರಿಚಯಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಅಪಾರ್ಟ್ಮೆಂಟ್ಗಳು ಮತ್ತು ವಾಣಿಜ್ಯ ಕಟ್ಟಡ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ ಖಾತಾಗಳನ್ನು ನೀಡಲು ಬಿಬಿಎಂಪಿಯು ಮುಂದಿನ ಒಂದು ವಾರದ ಒಳಗಾಗಿ ಹೊಸ ಮಾದರಿಯನ್ನು ಪರಿಚಯಿಸಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಇದೀಗ ಪರಿಚಯಿಸಲು ಮುಂದಾಗಿರುವ ಈ ಯೋಜನೆಯಿಂದ ಡೆವಲಪರ್ಗೆ ಅವಶ್ಯವಿರುವಷ್ಟಯ ಅಥವಾ ಬಯಸುವಷ್ಟು ಇ- ಖಾತಾಗಳನ್ನು ನೀಡಲಾಗುತ್ತದೆ. ಇದನ್ನು ಡೆವಲಪರ್ಗಳು ನೋಂದಾಯಿತ ಮಾರಾಟ ಪತ್ರದ ಮೂಲಕ ವೈಯಕ್ತಿಕವಾಗಿ ಖರೀದಿ ಮಾಡುವವರಿಗೆ ವರ್ಗಾಯಿಸಬಹುದಾಗಿದೆ. ಈ ಮಾದರಿಯು ವಸತಿ, ವಾಣಿಜ್ಯ ಮತ್ತು ಬಹು ಹಂತಸ್ತಿನ ಕಟ್ಟಡಗಳನ್ನು ಒಳಗೊಂಡಿರಲಿದ್ದು ಹೊಸ ಆಸ್ತಿ ಅಭಿವೃದ್ಧಿಗೆ ಅನ್ವಯಿಸುತ್ತದೆ ಎಂದು ಬಿಬಿಎಂಪಿಯ ಆದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ಈ ಹಿಂದೆ ಬಿಲ್ಡರ್ಗಳು ಅಥವಾ ಡೆವಲಪರ್ಗಳಿಗೆ ಪ್ರತ್ಯೇಕ ಯೂನಿಟ್ಗಳನ್ನು ಮಾರಾಟ ಮಾಡುತ್ತಿದ್ದರು ಮತ್ತು ಖರೀದಿದಾರರು ನಂತರ ಅದಕ್ಕೆ ಸಂಬಂಧಿಸಿದಂತೆ ಖಾತಾಗಳಿಗೆ ಅರ್ಜಿ ಸಲ್ಲಿಸುತ್ತಿದ್ದರು. ಈಗ ನಾವು ಎಲ್ಲಾ ಯೂನಿಟ್ಗಳಿಗೆ (ಉದಾ: ವಸತಿ ಸಮುಚ್ಛಯಗಳಿಗೆ) ಡೆವಲಪರ್ಗಳಿಗೆ ಇ-ಖಾತಾಗಳನ್ನು ಒಂದೇ ಬಾರಿಗೆ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಇ-ಖಾತಾ ಪಡೆಯುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಲಿಕೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಬಂದ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ನಗರದಲ್ಲಿ ಇ – ಖಾತಾ ವಿತರಣೆಯಲ್ಲಿ ಸುಧಾರಿತ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಈ ವಾರದಲ್ಲಿ ಇ – ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ನಗರದಲ್ಲಿ ಇ -ಖಾತಾಗೆ ಸಂಬಂಧಿಸಿದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ಕಡೆ ಸರ್ವರ್ ಸಮಸ್ಯೆ ಆಗುತ್ತಿದೆ ಸಹ. ಇ -ಖಾತಾಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದಾಗಿಯೂ ಹಾಗೂ ಈಗಾಗಲೇ ಶೇಕಡ 90ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿರುವುದಾಗಿಯೂ ಬಿಬಿಎಂಪಿ ಹೇಳಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯ ವರೆಗೆ ಇ-ಖಾತಾಗೆ ಸಂಬಂಧಿಸಿದಂತೆ ಒಟ್ಟು 46,962 ಅರ್ಜಿಗಳು ಬಂದಿವೆ. ಅವುಗಳ ಪೈಕಿ ಈಗಾಗಲೇ 39,784 ಅರ್ಜಿಗಳಿಗೆ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಿದ್ದೇವೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ 2311 ಇ-ಖಾತಾ ವಿತರಿಸಿದ್ದು, ಇ – ಖಾತಾಗೆ ಸಂಬಂಧಿಸಿದಂತೆ ಬಂದಿರುವ ಅರ್ಜಿಗಳ ಪೈಕಿ ಈಗಾಗಲೇ ಶೇ. 90ರಷ್ಟು ಅರ್ಜಿಗಳನ್ನು ಇ – ಖಾತಾ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಬಾಕಿಯಿರುವ ಅರ್ಜಿಗಳನ್ನು ಮುಂದಿನ 3 ದಿನಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಲಾಗಿದೆ.