ಬೆಂಗಳೂರು: ಆಸ್ತಿಗಳ ವಿಷಯದಲ್ಲಿ ಸರ್ಕಾರ ಸುಧಾರಣೆ ಕ್ರಮಗಳನ್ನು ಅನುಸರಿಸುತ್ತಿದೆ. ಈ ರೀತಿ ಇರುವಾಗಲೇ ಕೆಲವೊಂದು ಗಂಭೀರ ಕ್ರಮವನ್ನು ಸಹ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಬಿ -ಖಾತಾ ಅಭಿಯಾನವನ್ನೇ ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಇದರ ಮುಖ್ಯ ಉದ್ದೇಶ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು. ಇದೀಗ ಖಾತಾ ಮಾಡಿಸಿಕೊಳ್ಳಬೇಕಾದರೆ ಹಳೆಯ ಎಲ್ಲಾ ಬಾಕಿಗಳನ್ನೂ ಸಹ ಪಾವತಿ ಮಾಡಬೇಕು ಎಂದು ಬಿಬಿಎಂಪಿಯು ಷರತ್ತು ವಿಧಿಸುತ್ತಿದೆ.
ರಾಜ್ಯ ಸರ್ಕಾರವು ಆಸ್ತಿಗಳ ಮೂಲಕ ಆರ್ಥಿಕ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಎಲ್ಲಾ ಆಸ್ತಿಗಳ ವಿವರವನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು. ಯಾವುದೇ ಆಸ್ತಿಯು ಸಹ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಇದೀಗ ಆಸ್ತಿ ತೆರಿಗೆ ಪಾವತಿ ಮಾಡಿದರೆ ಮಾತ್ರ ಖಾತಾ ಸಿಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಲವು ನಿರ್ದಿಷ್ಟ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶಾಕ್ ಕೊಟ್ಟಿದೆ. ಹಲವು ವರ್ಷಗಳಿಂದ ಬೆಂಗಳೂರಿನ 8 ಲಕ್ಷಕ್ಕೂ ಹೆಚ್ಚು ಆಸ್ತಿದಾರರು ಯಾವುದೇ ಆಸ್ತಿ ತೆರಿಗೆಯನ್ನು ಪಾವತಿ ಮಾಡಿಲ್ಲ. ಅಲ್ಲದೆ ಇಷ್ಟು ಪ್ರಮಾಣದ ಆಸ್ತಿದಾರರ ಬಳಿ ಯಾವುದೇ ಖಾತಾ ಇಲ್ಲ. ಈ ರೀತಿಯ ನಿರ್ದಿಷ್ಟ ಆಸ್ತಿದಾರರು ಇದೀಗ ಆಸ್ತಿ ತೆರಿಗೆ ಪಾವತಿ ಮಾಡಿದರೆ ಮಾತ್ರ ಅವರಿಗೆ ಬಿ -ಖಾತಾ ಹಾಗೂ ಇ – ಖಾತಾ ಸಿಗಲಿದೆ. ಇಲ್ಲದಿದ್ದರೆ ಯಾವುದೇ ಖಾತಾ ಆನ್ಲೈನ್ನಲ್ಲಿ ಡೌನ್ಲೋಡ್ ಸಹ ಆಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ತೆರಿಗೆ ಪಾವತಿ ಮಾಡಿದರಷ್ಟೇ ಖಾತಾ: ಹಲವು ಆಸ್ತಿದಾರರು ಬಿಬಿಎಂಪಿಗೆ ತೆರಿಗೆ ಪಾವತಿ ಮಾಡಿಲ್ಲ. ಜಾಗ ಅಥವಾ ಮನೆ ರಿಜಿಸ್ಟ್ರೇಷನ್ ಆದಾಗಿನಿಂದಿನ ತೆರಿಗೆಯನ್ನು ಲೆಕ್ಕಹಾಕಿ ಆಸ್ತಿ ತೆರಿಗೆ ಸಂಗ್ರಹ ಮಾಡಲಿದ್ದೇವೆ. ಈ ರೀತಿ ತೆರಿಗೆ ಪಾವತಿ ಮಾಡಿದರೆ ಮಾತ್ರ ಅವರಿಗೆ ಖಾತಾ ಸೌಲಭ್ಯ ಸಿಗಲಿದೆ. ಇಲ್ಲದಿದ್ದರೆ ಖಾತಾ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ದುಪ್ಪಟ್ಟು ದಂಡದ ಎಚ್ಚರಿಕೆ: ಇನ್ನು ಇದೇ ಸಂದರ್ಭದಲ್ಲಿ ಆಸ್ತಿದಾರರಿಗೆ ದುಪ್ಪಟ್ಟು ದಂಡದ ಎಚ್ಚರಿಕೆಯನ್ನು ಸಹ ಕೊಡಲಾಗಿದೆ. ಈ ರೀತಿ ಯಾವುದೇ ಖಾತಾ ಇಲ್ಲದವರು ಕೂಡಲೇ ಖಾತಾ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಖಾತಾ ಮಾಡಿಸಿಕೊಳ್ಳದೆ ಇದ್ದರೆ ಮಾರ್ಚ್ ವೇಳೆ ತೆರಿಗೆ ಪ್ರಮಾಣ ಹೆಚ್ಚಳವಾಗಿ ದುಪ್ಪಟ್ಟು ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರ ಅರ್ಥ ಮಾರ್ಚ್ನಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ತೆರಿಗೆಯೂ ಸೇರ್ಪಡೆಯಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗಲಿದೆ ಎಂದು ಆಯುಕ್ತರು ಹೇಳಿದ್ದಾರೆ. ಹೀಗಾಗಿ ಯಾವುದೇ ಖಾತಾ ಇಲ್ಲದೆ ಇರುವವರು ಕೂಡಲೇ ಖಾತಾ ಮಾಡಿಸಿಕೊಳ್ಳುವುದು ಒಳ್ಳೆಯದು. ಇನ್ನು ಖಾತಾ ಮಾಡಿಸಿಕೊಳ್ಳಬೇಕು ಎಂದು ವಿಚಾರ ಮಾಡುತ್ತಿರುವ ಆಸ್ತಿದಾರರಿಗೆ ಬಿಬಿಎಂಪಿಯ ಹೊಸ ಆದೇಶವು ನುಂಗಲಾರದ ತುಪ್ಪವಾಗಿದೆ ಎಂದೇ ಹೇಳಲಾಗುತ್ತಿದೆ.