ಬೆಂಗಳೂರು: ಕರ್ನಾಟಕದ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಸರ್ಕಾರದ ಹಲವು ಯೋಜನೆಗಳ ಕುರಿತು ಭಾಷಣದಲ್ಲಿ ಉಲ್ಲೇಖಿಸಿದರು. ರಾಜ್ಯಪಾಲರ ಭಾಷಣದಲ್ಲಿ ಬೆಂಗಳೂರು ನಗರದ ಬಹು ಚರ್ಚಿತ 2ನೇ ವಿಮಾನ ನಿಲ್ದಾಣ ಯೋಜನೆ ಕುರಿತು ಸಹ ಮಾಹಿತಿ ನೀಡಲಾಗಿದೆ.
ಬೆಂಗಳೂರಿನ 2ನೇ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತದೆ? ಎಂಬುದು ಕುತೂಹಲಹದ ಸಂಗತಿಯಾಗಿದೆ. ಬೆಂಗಳೂರು ನಗರದ ಸುತ್ತಮುತ್ತಲೂ ಮೊದಲು 7 ಸ್ಥಳಗಳನ್ನು ಗುರುತಿಸಲಾಗಿತ್ತು. ಈಗ 3 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಆದರೆ ಅಧಿಕೃತ ಸ್ಥಳ ಯಾವುದು? ಎಂಬುದು ಇನ್ನೂ ನಿಗೂಢವಾಗಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ, ತುಮಕೂರು ಸಂಸದ ವಿ. ಸೋಮಣ್ಣ ತುಮಕೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಸರ್ಕಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇನ್ನೂ ಸಹ 2ನೇ ವಿಮಾನ ನಿಲ್ದಾಣದ ಸ್ಥಳದ ಬಗ್ಗೆ ಅಂತಿಮ ವರದಿ ಸಲ್ಲಿಕೆ ಮಾಡಿಲ್ಲ.
ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದೇನು?; ಬೆಂಗಳೂರು ನಗರದ ವಿವಿಧ ಯೋಜನೆಗಳ ಕುರಿತು ರಾಜ್ಯಪಾಲರು ಭಾಷಣದಲ್ಲಿ ಉಲ್ಲೇಖ ಮಾಡಿದರು. ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ದೇಶದಲ್ಲಿಯೇ ಅಭೂತಪೂರ್ವ ಮಾದರಿಯಲ್ಲಿ ಮುನ್ನಡೆಸುವ ಉದ್ದೇಶದಿಂದ ಹೊಸ ಕರ್ನಾಟಕ ಕೈಗಾರಿಕಾ ನೀತಿ 2025-30 ಅನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಬಂಡವಾಳ ಹೂಡಿಕೆಯಲ್ಲಿ ರಾಜ್ಯವು 2ನೇ ಸ್ಥಾನದಲ್ಲಿದೆ. 2024-25ನೇ ಸಾಲಿನಲ್ಲಿ ಏಪ್ರಿಲ್ 2024ರಿಂದ ಸೆಪ್ಟೆಂಬರ್ 2024ರ ಅಂತ್ಯದವರೆಗೆ ರಾಜ್ಯವು 88,853 ಮಿಲಿಯನ್ ಡಾಲರುಗಳಷ್ಟು ಮೌಲ್ಯದ ಸರಕು ಸೇವೆಗಳನ್ನು ರಫ್ತು ಮಾಡುವುದರೊಂದಿಗೆ ಒಟ್ಟಾರೆ ರಫ್ತನಲ್ಲಿ 1ನೇ ಸ್ಥಾನದಲ್ಲಿದೆ. 2023-24ಕ್ಕೆ ಹೋಲಿಸಿದರೆ ರಪ್ಲಿನಲ್ಲಿ ರಾಜ್ಯವು ಶೇ. 11.17 ರಷ್ಟು ಏರಿಕೆಯ ಪ್ರಗತಿಯನ್ನು ಸಾಧಿಸಿದೆ. ಸರ್ಕಾರವು ಹೊಸದಾಗಿ ಬೆಂಗಳೂರು ಹೊರವಲಯದಲ್ಲಿ ರೂ. 40,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಕ್ವಿನ್ ಸಿಟಿ ನಿರ್ಮಾಣ ಮಾಡಲು ಉದ್ದೇಶಿಸಿದೆ. ಇದರಿಂದಾಗಿ ಸುಮಾರು 80,000 ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು. ರಾಜ್ಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ವಿಜಯಪುರ ಜಿಲ್ಲೆಯಲ್ಲಿ ರೂ. 347 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಇದೇ ಸಾಲಿನಲ್ಲಿ ಮುಕ್ತಾಯಗೊಳಿಸಿ ಪ್ರಯಾಣಿಕರಿಗೆ ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ವಿಮಾನ ನಿಲ್ದಾಣ ರನ್ವೇ ವಿಸ್ತರಣೆಯನ್ನು ರೂ. 319 ಕೋಟಿ ವೆಚ್ಚದಲ್ಲಿ, ರಾಯಚೂರು ವಿಮಾನ ನಿಲ್ದಾಣವನ್ನು ರೂ. 219 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ತಿಳಿಸಿದರು.
ರಾಜ್ಯದ ಧರ್ಮಸ್ಥಳ, ಮಡಿಕೇರಿ ಮತ್ತು ಚಿಕ್ಕಮಗಳೂರಿನಲ್ಲಿ ಏರ್ಸ್ಟ್ರಿಪ್ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಗುರುತಿಸುವ ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಕೆಲಸ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 407 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಬ್ಯುಸಿನೆಸ್ ಪಾರ್ಕ್ ಅನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದರು. ರಾಜ್ಯಪಾಲರ ಭಾಷಣದಲ್ಲಿಯೂ ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಸ್ಥಳ ಎಲ್ಲಿ? ಎಂದು ಮಾಹಿತಿ ನೀಡಿಲ್ಲ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಮಾನ
ನಿಲ್ದಾಣ ನಿರ್ಮಾಣ ಮಾಡಲು ಬಯಸಿದ್ದಾರೆ. 2ನೇ ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ.