ಬೆಂಗಳೂರು: ಬೆಂಗಳೂರಿನ ಅಷ್ಟ ದಿಕ್ಕುಗಳಲ್ಲೂ ನಮ್ಮ ಮೆಟ್ರೋ ಜಾಲ ವಿಸ್ತರಣೆ ಮಾಡಲಾಗುತ್ತಿದೆ. ಈಗಾಗಲೇ ಒಂದಷ್ಟು ಮಾರ್ಗಗಳ ನಿರ್ಮಾಣ ಕಾರ್ಯ ನಡೆದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೆಚ್ಚುವರಿಯಾಗಿ 197 ಕಿಲೋಮೀಟರ್ ವಿಸ್ತರಣೆ ಮಾಡಲು ಕಾರ್ಯಸಾಧುವೆ ಎಂಬ ಅಧ್ಯಯನ ನಡೆಯುತ್ತಿದೆ. ಹಾಲಿ 77 ಕಿಲೋಮೀಟರ್ ಜಾಲ ಇದ್ದು, ಅದರ ಜಾಲ ಮತ್ತಷ್ಟು ವಿಸ್ತರಣೆಗೆ ನಿಗಮ ಪ್ಲಾನ್ ರೂಪಿಸಿದೆ.

ಬೆಂಗಳೂರು ಮೆಟ್ರೋ ಜಾಲವು 76.95 ಕಿಲೋ ಮೀಟರ್ ನಿಂದ ಮುಂದಿನ ದಿನಗಳಲ್ಲಿ 255 ಕಿಲೋ ಮೀಟರ್ಗೆ ವಿಸ್ತರಣೆಗೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಇತ್ತೀಚೆಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೇವನಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಿಸುವುದಾಗಿ ತಿಳಿಸಿದ್ದಾರೆ, ಅದರ ಬೆನ್ನಲ್ಲೆ ಹೆಚ್ಚುವರಿ ವಿಸ್ತರಣೆ ಮಾರ್ಗವನ್ನು ಸೇರಿಸಲಾಗಿದೆ ಎಂದು TNIE ವರದಿ ಮಾಡಿದೆ. ಹಾಗಾದರೆ ಯಾವೆಲ್ಲ ಪ್ರದೇಶಗಳಿಮದ ಮೆಟ್ರೋ ಇನ್ನಷ್ಟು ವಿಸ್ತರಣೆಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ.
ಕಾರ್ಯಸಾಧ್ಯತಾ ಅಧ್ಯಯನ ನಡೆಸುತ್ತಿರುವ ಮಾರ್ಗ/ಕಿಮೀ ಸರ್ಕಾರ ಒಪ್ಪಿಗೆ ದೊರೆತ ಬಳಿಕ ಚಲ್ಲಘಟ್ಟದಿಂದ ಬಿಡದಿಯಿಂದ ರಾಮನಗರ ಜಿಲ್ಲೆಯವರೆಗೆ (15 ಕಿ.ಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (ಕನಕಪುರ) ವರೆಗೆ (24 ಕಿ.ಮೀ.), ಕಾಳೇನ ಅಗ್ರಹಾರ ರಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀ ಪಾರ್ಕ್ ವರೆಗೆ (68 ಕಿ.ಮೀ), ಹಾಗೂ ಬೊಮ್ಮಸಂದ್ರದಿಂದ ಅತಿಬೆಲೆವರೆಗೆ (11) ಮತ್ತು ಮಾದವರದಿಂದ ತುಮಕೂರುವರೆಗೆ (52 ಕಿ.ಮೀ) ಮೆಟ್ರೋ ವಿಸ್ತರಣೆಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದೆ. ಶೀಘ್ರವೇ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಲಿದೆ.
27 ಕಿಮೀ ಉದ್ದ ವಿಸ್ತರಣೆ ಹೊಸ ಸೇರ್ಪಡೆ ಈ ಮೇಲಿನ ಅಧ್ಯಯನ ವ್ಯಾಪ್ತಿಯಗೆ ಇತ್ತೀಚೆಗೆ ಒಟ್ಟು 27 ಕಿ.ಮೀ. ಉದ್ದದ ಮೂರು ಮಾರ್ಗಗಳನ್ನು ಸೇರಿಸಿಕೊಳ್ಳಲಾಗಿದೆ. ಅವುಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಗುತ್ತಿದೆ. ಆ ಮೂರು ಮಾರ್ಗಗಳು ಯಾವುವು ಎಂದು ನೋಡುವುದಾದರೆ, ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಒಳಪಡುವು ಮಾಗಡಿ ರಸ್ತೆ-ಕಡಬಗೆರೆ ಲೈನ್, ಕಡುಬಗೆರೆಯಿಂದ ತಾವೆರಕೆರೆವರೆಗೆ (6 ಕಿ.ಮೀ) ವಿಸ್ತರಣೆಗೆ ಪ್ಲಾನ್ ಮಾಡಲಾಗಿದೆ.
ಎರಡನೇಯದಾಗಿ ದೊಡ್ಡಜಾಲದಿಂದ ದೇವನಹಳ್ಳಿ (ನೀಲಿ ಮಾರ್ಗ-6 ಕಿ.ಮೀ) ಮತ್ತು ಕೆ.ಆರ್. ಪುರದಿಂದ ಹೊಸಕೋಟೆವರೆಗೆ (15 ಕಿ.ಮೀ) ಉದ್ದದ ಪ್ರತ್ಯೇಕ ಮಾರ್ಗ ನಿರ್ಮಿಸಲು ಹಾಲಿ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಮೆಟ್ರೋ ಜಾಲ 350 ಕಿ.ಮೀ.ಗೆ ಏರಿಕೆ ಇದೇ 2025ರ ವರ್ಷಾಂತ್ಯಕ್ಕೆ ಬಿಎಂಆರ್ಸಿಎಲ್ ಅಧಿಕಾರಿಗಳ ತಂಡವು 197 ಕಿ.ಮೀ. ಜಾಲ ವಿಸ್ತರಣೆಗೆ ಸಂಬಂಧಿಸಿದ ಕಾರ್ಯಸಾಧ್ಯತೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಯಾವ ಮಾರ್ಗ ವಿಸ್ತರಣೆ ಮಾಡಬೇಕು. ಯಾವ ಮಾರ್ಗದ ಯೋಜನೆ ಮೊದಲು ಕೈಗೆತ್ತಿಕೊಂಡು ಅನುಮೋದನೆ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಆಯ್ಕೆ ಆಗಿರುತ್ತದೆ. ಸದ್ಯ ವರದಿ ಸಲ್ಲಿಕೆ ಆದರೆ, ಬಹುಪಾಲು ಒಪ್ಪುವ ಸಾಧ್ಯತೆ ಇರುತ್ತದೆ. ಕನಿಷ್ಠ 90 ರಿಂದ 100 ಕಿ.ಮೀ. ಹೊಸ ಮಾರ್ಗಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ನಮ್ಮ ಮೆಟ್ರೋ ಜಾಲ 350 ಕಿ.ಮೀ.ವರೆಗೆ ಹೆಚ್ಚಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.