ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿ ಜನರಿಗೆ ಮೇಲೆ ಆರ್ಥಿಕ ಒತ್ತಡ ಹೇರಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ಉತ್ತೇಜಿಸುವ ಬದಲು ಟಿಕೆಟ್ ಬೆಲೆ ಹೆಚ್ಚಳ ಮಾಡಿದೆ. ಸರ್ಕಾರದ ನಡೆ ಜನರ ವಿರುದ್ಧವಾಗಿದೆ. ಆದಾಯ ಗಳಿಕೆಗೆ ಬೇರೆ ವಿಧಾನ ಅನುಸರಿಸಬೇಕು. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಇತರ ಮೆಟ್ರೋ ನಗರಗಳಿಗಿಂತ ಬೆಂಗಳೂರು ಮೆಟ್ರೋ ಪ್ರಯಾಣ ದುಬಾರಿಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಳವಳವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ದರ ಏರಿಕೆ ಸಂಬಂಧ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ಬೆಂಗಳೂರು ಮೆಟ್ರೋ ದರವು ದೇಶದ ಬೇರೆ ಬೇರೆ ಮೆಟ್ರೋ ನಗರಗಳಿಗೆ ಸಮಾನವಾಗಿರಬೇಕು. ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ (DMRC) ರೈಲುಗಳಲ್ಲಿ ಪ್ರಯಾಣಿಸುವವರ 12 ಕಿ.ಮೀ ಪ್ರಯಾಣಕ್ಕೆ ಕೇಲವ 30 ರೂಪಾಯಿ ಕೊಟ್ಟು ಕೋಡಾಡುತ್ತಾರೆ. ಆದರೆ ಅದೇ 12 ಕಿ.ಮೀ ದೂರ ಪ್ರಯಾಣಿಸಲು ಬೆಂಗಳೂರಲ್ಲಿ 60 ರೂಪಾಯಿ ಪಾವತಿಸಬೇಕಾಗುತ್ತದೆ.
ಬೆಂಗಳೂರು ಮೆಟ್ರೋ ರೈಲಿನ ದರ ಪಾವತಿಯನ್ನು ದ್ವಿಗುಣಗೊಳಿಸಲಾಗಿದೆ. ನಮ್ಮ ಮೆಟ್ರೋ ಪ್ರಯಾಣದ ಗರಿಷ್ಠ ಮೊತ್ತವೇ ರೂಪಾಯಿ 60 ರಿಂದ 90 ರೂಪಾಯಿ ಇದೆ. ಇದು ಮೊದಲಿಗಿಂತಲೂ ಶೇಕಡಾ 50ರಷ್ಟು ಹೆಚ್ಚಳವಾಗಿದ್ದು, ಈ ಏರಿಕೆ ನ್ಯಾಯಸಮ್ಮತವಾಗಿಲ್ಲ ಎಂದು ತೇಜಸ್ವಿ ಸೂರ್ಯ ಅವರು ಆಕ್ಷೇಪ ಎತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಜನರು ಮೆಟ್ರೋ ದರ ಏರಿಕೆಗೆ ವಿರೋಧ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಶೇಕಡಾ 15ರಷ್ಟು ಏರಿಕೆ ಮಾಡಿದೆ. ಇದು ಜನರಿಗೆ ಆಥಿರ್ಕ ಹೊರೆ ಹೊರಿಸಿದೆ ಎನ್ನುವಾಗಲೇ ಬಸ್ ಸಾರಿಗೆ ಜೊತೆಗೆ ಮೆಟ್ರೋ ಸಾರಿಗೆಯು ದುಬಾರಿಯಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದಿದ್ದಾರೆ. ದೇಶದ ಬೇರಾವುದೇ ಮೆಟ್ರೋ ನಗರಗಳಲ್ಲಿ ಮೆಟ್ರೋ ರೈಲಿನ ಪ್ರಯಾಣಕ್ಕೆ ಇಷ್ಟು ಹೆಚ್ಚಿನ ಪ್ರಮಾಣದ ಶುಲ್ಕ ವಿಧಿಸಿಲ್ಲ. ಯಾವ ನಗರಗಲ್ಲೂ 60 ರೂಪಾಯಿಗಿಂತಲೂ ಬೆಲೆ ಹೆಚ್ಚಿಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಿದೆ.
ಬಿಎಂಆರ್ಸಿಎಲ್ ಕೂಡಲೇ ದರ ಪರಿಷ್ಕರಣೆ ನಿರ್ಧಾರ ಮರು ಪರಿಶೀಲಿಸಬೇಕು. ಮೆಟ್ರೋ ಆದಾಯ ಹೆಚ್ಚಿಸಲು ಪರ್ಯಾಯ ಮಾರ್ಗಗಳಾದ ಜಾಹೀರಾತುಗಳ ಮೂಲಕ, ವಾಹನ ಪಾರ್ಕಿಂಗ್, ಪ್ರಮೋಷನ್, ಕಟ್ಟಡದಲ್ಲಿ ಮಳಿಗೆಗಳ ಬಾಡಿಗೆ ನೀಡುವುದು ಸೇರಿದಂತೆ ಇಂತಹ ವಿವಿಧ ಮೂಲಗಳಿಂದ ಆದಾಯ ಹೆಚ್ಚಿಸಿಕೊಳ್ಳಬೇಕು. ಅದನ್ನು ಬಿಟ್ಟು ದರ ಏರಿಕೆ ಮಾಡುವುದು ಸರಿಯಲ್ಲ ಎಂದು ಅವರು ಒತ್ತಾಯಿಸಿದರು. ಬೆಂಗಳೂರಿನ ಪ್ರಯಾಣ ದರ ದುಬಾರಿಯಾಗಿದ್ದು, ಪುನರ್ ಪರಿಶೀಲಿಸಬೇಕು. ಇತರ ಮೆಟ್ರೋ ನಗರಗಳಂತೆ ಪ್ರಯಾಣಿಕ ಸ್ನೇಹಿ ದರ ಇರಲಿ. ಹೆಚ್ಚುವರಿ ಆದಾಯಕ್ಕಾಗಿ ಜನರ ಮೇಲೆ ಒತ್ತಡ ಹೇರುವುದು ಬೇಡ ಎಂದು ತಿಳಿಸಲಾಗಿದೆ.