ಬೆಂಗಳೂರು: ಕರ್ನಾಟಕ ಸರ್ಕಾರದ ಒಪ್ಪಿಗೆ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜನವರಿ 5ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಶೇ 15ರಷ್ಟು ಏರಿಕೆ ಮಾಡಿತ್ತು. ಈಗ ಪ್ರತಿದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳನ್ನು ಪರಿಷ್ಕರಣೆ ಮಾಡಿದೆ. ಜನವರಿ 9ರಿಂದಲೇ ಜಾರಿಗೆ ಪಾಸುಗಳ ದರಗಳನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಲಾಗಿದೆ.
ಈ ಕುರಿತು ಬುಧವಾರ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಆದೇಶ ಸಂಸ್ಥೆಯ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳ ಪರಿಷ್ಕರಣೆ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಆದೇಶದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿತರಣೆ ಮಾಡುತ್ತಿದೆ. ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿಕ ದೃಷ್ಟಿಯಿಂದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ದರ ಏರಿಕೆ 9/1/2025ರಿಂದ ಜಾರಿಗೆ ಬರಲಿದೆ ಎಂದು ಆದೇಶ ತಿಳಿಸಿದೆ.
ಆದೇಶದ ವಿವರಗಳು: ಬಿಎಂಟಿಸಿಯ ಆದೇಶದಲ್ಲಿ ರೂ. 140 ವಜ್ರ ದೈನಿಕ ಪಾಸು ಮತ್ತು ರೂ. 2000 ವಜ್ರ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಸದರಿ ಸೇವೆಯಲ್ಲಿ ಕೆಂ.ಬ.ನಿಲ್ದಾಣ/ ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ದೇವನಹಳ್ಳಿಯವರೆಗೂ ಹಾಗೂ ದೇವನಹಳ್ಳಿಯಿಂದ ಕೆಂ.ಬ.ನಿಲ್ದಾಣದವರೆಗೂ ಪ್ರಯಾಣಿಸಬಹುದು (ಟೋಲ್ ಪ್ಲಾಜಾ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಪ್ರಯಾಣಕ್ಕೆ ಅನ್ವಯವಾಗುವ ಟೋಲ್ ಶುಲ್ಕ (ಜಿಎಸ್ಟಿ ಒಳಗೊಂಡು) ಪಾವತಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ರೂ.140 ವಜ್ರ ದೈನಿಕ ಪಾಸು ಮತ್ತು ರೂ. 2000 ವಜ್ರ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಸದರಿ ಸೇವೆಯಲ್ಲಿ ಕೆಂ.ಬ.ನಿಲ್ದಾಣ/ ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ಚಿಕ್ಕಬಳ್ಳಾಪುರದವರೆಗೂ ಹಾಗೂ ಚಿಕ್ಕಬಳ್ಳಾಪುರದಿಂದ ಕೆಂ.ಬ.ನಿಲ್ದಾಣದವರೆಗೂ ಪ್ರಯಾಣಿಸಲು ಹೆಚ್ಚುವರಿಯಾಗಿ ಪ್ರತಿ ಸುತ್ತುವಳಿಗೆ ರೂ. 40 (ಜಿಎಸ್ಟಿ ಒಳಗೊಂಡು) ಹಾಗೂ ಅನ್ವಯವಾಗುವ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ಹೇಳಿದೆ. ಸದರಿ ಪಾಸುದಾರರು ಪಾಸಿನೊಂದಿಗೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹಾಗೂ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ಪ್ರಯಾಣಿಸಬೇಕಾದಲ್ಲಿ ಪ್ರತಿ ಸುತ್ತುವಳಿಗೆ ರೂ. 40 (ಜಿಎಸ್ಟಿ ಒಳಗೊಂಡು) ಹೆಚ್ಚುವರಿಯಾಗಿ ಪಾವತಿಸುವುದು. ಸಾಮಾನ್ಯ ಮಾಸಿಕ ಪಾಸುದಾರರು ಈ ಸೇವೆಗಳಲ್ಲಿ ಪಾಸಿನೊಂದಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ. ಮೇಲ್ಕಂಡ ಎಲ್ಲಾ ಪಾಸುದಾರರು ಟೋಲ್ ಮಾರ್ಗಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕಗಳನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ. ಸಂಸ್ಥೆಯು ವಿತರಿಸುವ ಯಾವುದೇ ಪಾಸುಗಳನ್ನು, ಸಂಸ್ಥೆಯ ವಿಶೇಷ (ಉದಾ: ಬೆಂಗಳೂರು ದರ್ಶಿನಿ, ಈಶ ಪೌಂಡೇಶನ್, ವಂಡರ್ಲಾ) ಸೇವೆಗಳಲ್ಲಿ ಮಾನ್ಯ ಇರುವುದಿಲ್ಲ. ಪರಿಷ್ಕೃತ ದರದ ಪಾಸುಗಳು ಸರಬರಾಜುಗೊಳ್ಳುವವರೆಗೆ ಪ್ರಸ್ತುತ ಇರುವ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ಮೇಲೆ ಪರಿಷ್ಕೃತ ಪಾಸಿನ ದರದ ಮೊಹರು/ ಸ್ಟಿಕ್ಕರ್ಗಳನ್ನು ಹಾಕಿ ವಿತರಣೆ ಮಾಡಲು ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರು ಕಡ್ಡಾಯವಾಗಿ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದೆ. ಪರಿಷ್ಕೃತ ಪಾಸಿನ ದರಗಳನ್ನು ಇ.ಟಿ.ಎಂ ಯಂತ್ರದಲ್ಲಿ ಹಾಗೂ ಟುಮ್ಯಾಕ್ ಮೊಬೈಲ್ ಆಫ್ (ಡಿಜಿಟಲ್ ಪಾಸುಗಳು) ನಲ್ಲಿ ಅಳವಡಿಸಲು ಮುಖ್ಯ ಗಣಕ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳುವುದು. ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಗಳು ಪರಿಷ್ಕೃತ ದರಗಳ ಪಾಸುಗಳನ್ನು ಸರಬರಾಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಹೇಳಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ಹಿರಿಯ/ ಘಟಕ ವ್ಯವಸ್ಥಾಪಕರುಗಳು ಹಾಗೂ ಬಸ್ ನಿಲ್ದಾಣಾಧಿಕಾರಿಗಳು ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರ ಪರಿಷ್ಕರಣೆಯ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಿಸಿ ನಿರ್ವಾಹಕ/ ಚಾಲಕ/ ಚಾಲಕ ಕಂ ನಿರ್ವಾಹಕ ಹಾಗೂ ಇತರ ಸಂಬಂಧಪಟ್ಟವರ ಗಮನಕ್ಕೆ ತಂದು ಸಾಮಾನ್ಯ ಸ್ಥಾಯಿ ಆದೇಶ ಜಾರಿಯಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶವಾಗದಂತೆ ಎಚ್ಚರವಹಿಸುವುದು ಎಂದು ತಿಳಿಸಲಾಗಿದೆ.
ಪಾಸುಗಳ ದರಪಟ್ಟಿ * ಸಾಮಾನ್ಯ ದೈನಿಕ ಪಾಸು. ಪ್ರಸ್ತುತ ದರ 70 ರೂ., ಪರಿಷ್ಕೃತ ದರ 80 ರೂ.ಗಳು * ಸಾಮಾನ್ಯ ಸಾಪ್ತಾಹಿಕ (ವಾರದ) ಪಾಸು. ಪ್ರಸ್ತುತ ದರ 300 ರೂ., ಪರಿಷ್ಕೃತ ದರ 350 ರೂ.ಗಳು * ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸು. ಪ್ರಸ್ತುತ ದರ 945 ರೂ., ಪರಿಷ್ಕೃತ ದರ 1080 ರೂ. * ಸಾಮಾನ್ಯ ಮಾಸಿಕ ಪಾಸುಗಳು. ಪ್ರಸ್ತುತ ದರ 1050 ರೂ.ಗಳು., ಪರಿಷ್ಕೃತ ದರ 1200 ರೂ.ಗಳು * ನೈಸ್ ರಸ್ತೆ ಸಾಮಾನ್ಯ ಮಾಸಿಕ ಪಾಸು (ಟೋಲ್ ಶುಲ್ಕ ಒಳಗೊಂಡು). ಪ್ರಸ್ತುತ ದರ 2,200 ರೂ., ಪರಿಷ್ಕೃತ ದರ 2,350 ರೂ.ಗಳು. ವಾಯು ವಜ್ರ ಪಾಸುಗಳ ದರ * ವಜ್ರ ದೈನಿಕ ಪಾಸು. ಪಾಸು ದರ 114.29, ಜಿಎಸ್ಟಿ 5.71 ಒಟ್ಟು 120 ರೂ.ಗಳು. ಪರಿಷ್ಕೃತ ದರ ಪಾಸಿನ ದರ 133.33, ಜಿಎಸ್ಟಿ 6.67, ಒಟ್ಟು 140 ರೂ.ಗಳು. * ವಜ್ರ ಮಾಸಿಕ ಪಾಸು. ಪಾಸು ದರ 1714.29, ಜಿಎಸ್ಟಿ 85.71, ಒಟ್ಟು 1800 ರೂ.ಗಳು. ಪರಿಷ್ಕೃತ ದರ ಪಾಸುಗಳು 1904.76, ಜಿಎಸ್ಟಿ 95.24, ಒಟ್ಟು 2000 ರೂ.ಗಳು. * ವಾಯು ವಜ್ರ ಮಾಸಿಕ. ಪಾಸು ದರ 3000, ಟೋಲ್ ಶುಲ್ಕ 576, ಜಿಎಸ್ಟಿ 179, ಒಟ್ಟು 3755 ರೂ.ಗಳು. ಪರಿಷ್ಕತ ದರ ಪಾಸುಗಳು 3233.52, ಟೋಲ್ ಶುಲ್ಕ 576, ಜಿಎಸ್ಟಿ 190.48, ಒಟ್ಟು 4000 ರೂ.ಗಳು. * ವಿದ್ಯಾರ್ಥಿ ವಜ್ರ ಮಾಸಿಕ ಪಾಸು. ಪಾಸು ದರ 1142, ಜಿಎಸ್ಟಿ 58, ಒಟ್ಟು 1200 ರೂ.ಗಳು. ಪರಿಷ್ಕೃತ ದರ ಪಾಸಿನ ದರ 1333.33, ಜಿಎಸ್ಟಿ 66.67, ಒಟ್ಟು 1400 ರೂ.ಗಳು. ಸಾಮಾನ್ಯ ಸೇವೆಯ ಮಾಸಿಕ ಪಾಸುದಾರರು ವಜ್ರ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರತಿ ಸುತ್ತುವಳಿ ಚೀಟಿ ದರ ಪರಿಷ್ಕರಣೆ. * ರೂ. 1080 ರ ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸುದಾರರು ಮೂಲ ದರ 23.81, ಜಿಎಸ್ಟಿ 1.19, ಒಟ್ಟು 25 ರೂ.ಗಳು. ಪರಿಷ್ಕೃತ ದರ ಮೂಲ ದರ 28.57, ಜಿಎಸ್ಟಿ 1.43, ಒಟ್ಟು 30 ರೂ.ಗಳು. * ರೂ. 1200ರ ಸಾಮಾನ್ಯ ಮಾಸಿಕ ಪಾಸುದಾರರು. ಮೂಲದರ 23.81, ಜಿಎಸ್ಟಿ 1.19, ಒಟ್ಟು 25 ರೂ.ಗಳು. ಪರಿಷ್ಕೃತ ದರ ಮೂಲ ದರ 28.87, ಜಿಎಸ್ಟಿ 1.43, ಒಟ್ಟು 30 ರೂ.ಗಳು. * ರೂ. 2350ರ ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು. ಮೂಲ ದರ 28.57, ಜಿಎಸ್ಟಿ 1.43, ಒಟ್ಟು 30 ರೂ.ಗಳು.