ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ವಿವಿಧ ಪ್ರದೇಶಗಳಿಂದ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸಂಚಾರ ನಡೆಸಲು ಅನುಕೂಲವಾಗುವಂತೆ ವಾಯು ವಜ್ರ ಬಸ್ಗಳನ್ನು ಓಡಿಸುತ್ತದೆ. ಕ್ಯಾಬ್, ಖಾಸಗಿ ವಾಹನಗಳ ವೆಚ್ಚ ಅಧಿಕವಾಗುವುದರಿಂದ ವಿಮಾನ ನಿಲ್ದಾಣದ ಪ್ರಯಾಣಿಕರು, ಸಿಬ್ಬಂದಿಗಳು ಬಿಎಂಟಿಸಿ ಬಸ್ಗಳಲ್ಲಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸುತ್ತಾರೆ.
ಬಿಎಂಟಿಸಿ ಮಾಹಿತಿ ಅನ್ವಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೆಂಬರ್ ತಿಂಗಳಿನಲ್ಲಿ ವಾಯು ವಜ್ರ ಎಸಿ ಬಸ್ಗಳಲ್ಲಿ 4,07,531 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದಾರೆ. ವಾಯು ವಜ್ರ ಬಸ್ ಸೇವೆ ಪರಿಚಯಿಸಿದ ಬಳಿಕ ಮೊದಲ ಬಾರಿಗೆ ಇಷ್ಟು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮನ/ ನಿರ್ಗಮನ ಬಸ್ಗಳನ್ನು ಬಳಕೆ ಮಾಡಿ, ಹೊಸ ದಾಖಲೆಯನ್ನು ಬರೆದಿದ್ದಾರೆ.
ಬೆರಳ ತುದಿಯಲ್ಲಿ ಮಾಹಿತಿ: ಬಿಂಟಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಮಾಹಿತಿಗಾಗಿ http://kias.mybmtc.com ಎಂಬ ಹೊಸ ವೆಬ್ಸೈಟ್ ಆರಂಭಿಸಿದೆ. ಏರ್ಪೋರ್ಟ್ಗೆ ಸಂಚಾರ ನಡೆಸುವ ವಾಯು ವಜ್ರ ಬಸ್ಗಳ ಕುರಿತ ಎಲ್ಲಾ ಮಾಹಿತಿಗಳು ಈ ವೆಬ್ ಸೈಟ್ನಲ್ಲಿ ಲಭ್ಯವಿದೆ.
ವಿಮಾನ ನಿಲ್ದಾಣ ಟರ್ಮಿನಲ್ ಹೊರಗೆ ಯಾವ ಕಡೆ ಸಾಗುವ ಬಿಎಂಟಿಸಿ ಬಸ್ ಎಲ್ಲಿ ನಿಲ್ಲುತ್ತದೆ?, ವೇಳಾಪಟ್ಟಿ, ಯಾವ ಮಾರ್ಗದಲ್ಲಿ ಸಾಗುತ್ತದೆ?, ನಿಲ್ದಾಣಗಳು ಯಾವುದು?, ದರ ಎಷ್ಟು ಎಂಬ ಮಾಹಿತಿ ಇಲ್ಲಿ ಸಿಗಲಿದೆ. ನೀವು ಸಂಚಾರ ನಡೆಸಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಬಸ್ಗಳ ಲೈವ್ ಲೊಕೇಷನ್ಗಳನ್ನು ಸಹ ಇಲ್ಲಿ ಪಡೆಯಬಹುದಾಗಿದೆ.
ವಾಯು ವಜ್ರ ಬಸ್ಗಳ ಸಂಚಾರವನ್ನು ಹೇಗೆ ಇನ್ನಷ್ಟು ಉತ್ತಮ ಪಡಿಸಬಹುದು? ಎಂದು ಸಲಹೆಗಳನ್ನು ಸಹ ನೀಡಬಹುದು. ಪ್ರಯಾಣಿಕರು ಬಸ್ ಸಂಚಾರ ನಡೆಸುವ ಪ್ರಮುಖ ನಿಲ್ದಾಣಗಳ ಸಿಬ್ಬಂದಿಯನ್ನು ಸಂಪರ್ಕ ಮಾಡಲು ಸಹಾಯಕವಾಗುವಂತೆ ಅವರ ದೂರವಾಣಿ ಸಂಖ್ಯೆಯನ್ನು ಸಹ ನೀಡಲಾಗಿದೆ. ಇಷ್ಟು ದಿನ ಮೈ ಬಿಎಂಟಿಸಿ ವೆಬ್ಸೈಟ್ನಲ್ಲಿ ನಗರದ ಎಲ್ಲಾ ಬಸ್ಗಳ ಜೊತೆ ವಾಯು ವಜ್ರ ಬಸ್ಗಳ ಮಾಹಿತಿಯೂ ಇರುತ್ತಿತ್ತು. ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಇನ್ನಷ್ಟು ಪ್ರಯಾಣಿಕರನ್ನು ಸೆಳೆಯಲು ಅನುಕೂಲವಾಗುವಂತೆ ಹೊಸ ವೆಬ್ಸೈಟ್ ರೂಪಿಸಲಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದು, “ಪ್ರಯಾಣಿಕರಿಗೆ ಮಾಹಿತಿಗಳು ಸುಲಭವಾಗಿ ಸಿಗುವಂತೆ ಆಗಲು ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ. ಅದರ ಭಾಗವಾಗಿಯೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿಗೆ ಸಾಗುವ ಪ್ರಯಾಣಿಕರ ಅನುಕೂಲಕ್ಕಾಗಿ ಕಿಯಾಸ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೊಸ ವೆಬ್ಸೈಟ್ ರೂಪಿಸಲಾಗಿದೆ” ಎಂದು ಹೇಳಿದ್ದಾರೆ.