ಬೆಂಗಳೂರು: ಬೆಂಗಳೂರಿನ ಸಂಚಾರ ಸುವ್ಯವಸ್ಥೆಗೆ ವಿಶೇಷ ಕೊಡುಗೆ ನೀಡಿದ್ದ ಕರ್ನಾಟಕದ ಹಿರಿಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ, ಬಿ.ಎನ್.ಗರುಡಾಚಾರ್ ಇಂದು ನಿಧನರಾಗಿದ್ದಾರೆ. ಇವರು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರ ತಂದೆಯೂ ಹೌದು. ಗರುಡಾಚಾರ್ ಅವರ ಬೆಂಗಳೂರಿನ ನಿವಾಸದಲ್ಲಿ ಇವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿ.ಎನ್.ಗರುಡಾಚಾರ್ ಅವರು ಬೆಂಗಳೂರು ನಗರದ ಕಮೀಷನರ್, ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಹಲವು ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದರು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆಯಾದಾಗ ಗರುಡಾಚಾರ್ ಅವರು ಟ್ರಾಫಿಕ್ ವಿಭಾಗದ ಡಿಸಿಪಿ ಆಗಿದ್ದರು. 1963ರಲ್ಲಿ ಬೆಂಗಳೂರಿನ ಎನ್.ಆರ್.ಜಂಕ್ಷನ್ನಲ್ಲಿರುವ ಮೊದಲ ಟ್ರಾಫಿಕ್ ಸಿಗ್ನಲ್ ಇವರ ಮುಂದಾಳತ್ವದಲ್ಲೇ ಸ್ಥಾಪನೆಯಾಗಿತ್ತು.
ಇವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಂಗಾಡು ಗ್ರಾಮದವರು. ಕೃಷಿ ಕುಟುಂಬದಲ್ಲೇ ಆರ್ಥಿಕ ಸಂಕಷ್ಟದಲ್ಲಿ ಬೆಳೆದ ಇವರು ಬಳಿಕ ಅವರಿವರ ಮನೆಗಳಲ್ಲಿ ಆಶ್ರಯ ಪಡೆದು ಶಿಕ್ಷಣ ಪಡೆದಿದ್ದರು. ಬಳಿಕ ಎಂ.ಎ.ಸ್ನಾತಕೋತ್ತರ ಪದವಿ ಪಡೆದು 1953ರಲ್ಲಿ ಐಪಿಎಸ್ ಕೂಡ ಆಗಿದ್ದರು. ಬಳಿಕ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಹಲವು ಉನ್ನತ ಶ್ರೇಣಿಯ ಹುದ್ದೆಗಳಿಗೆ ಇವರು ನೇಮಕಗೊಂಡಿದ್ದರು. ದಕ್ಷ ಮತ್ತು ಪ್ರಾಮಾಣಿಕ ಸೇವೆ ಜೊತೆಗೆ ಬೆಂಗಳೂರಿನ ಟ್ರಾಫಿಕ್ ವಿಚಾರದಲ್ಲಿ ಇವರ ಕೊಡುಗೆ ಅವಿಸ್ಮರಣೀಯ ಎನ್ನಲಾಗಿದೆ. ಇವರ ನಿಧನಕ್ಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಗರುಡಾಚಾರ್ ಅವರ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದು, ಕರ್ನಾಟಕ ಕಂಡಂತಹ ದಕ್ಷ ಹಾಗೂ ಪ್ರಯೋಗಶೀಲ ಪೊಲೀಸ್ ಅಧಿಕಾರಿ ಬಿ.ಎನ್.ಗರುಡಾಚಾರ್ ಅವರು ವಿಧಿವಶರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಬೆಂಗಳೂರಿಗೆ ಟ್ರಾಫಿಕ್ ಸಿಗ್ನಲ್ ಪರಿಚಯಿಸಿದ್ದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ಸಾಕಷ್ಟು ಪರಿವರ್ತನೆಗೆ ಕಾರಣರಾಗಿದ್ದರು. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.
ಹಿರಿಯರು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಖಃವಾಯಿತು. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ. ಭಗವಂತನು ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೂಡ ಪ್ರಾರ್ಥಿಸಿದ್ದಾರೆ. ಕರ್ನಾಟಕ ಕಂಡಂತಹ ಒಬ್ಬ ದಕ್ಷ ಐಪಿಎಸ್ ಅಧಿಕಾರಿ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ ಗರುಡಾಚಾರ್ ಅವರ ತಂದೆ ಗರುಡಾಚಾರ್ ರವರು ನಿಧನರಾಗಿದ್ದಾರೆ ಎನ್ನುವುದು ಅತ್ಯಂತ ನೋವಿನ ಸಂಗತಿ. ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ಬೆಂಗಳೂರು ಮಹಾನಗರದ ಪೊಲೀಸ್ ಕಮಿಷನರ್ , ಡಿಜಿ, ಐಜಿಪಿಯಾಗಿ, ಕೆಎಟಿ ಸದಸ್ಯರಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು ಎಂದು ಬಿಜೆಪಿ ನಾಯಕ ಆರ್.ಅಶೋಕ್ ಸಂತಾಪ ಸೂಚಿಸಿದ್ದಾರೆ.