ಬೆಂಗಳೂರು: ಬೆಂಗಳೂರಿನಲ್ಲಿ ಏರ್ ಶೋಗಾಗಿ ಸಿದ್ಧತೆಗಳು ನಡೆದಿವೆ. ಈ ನಡುವೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶವೊಂದು ಬಂದಿದ್ದು, ಇದರಿಂದಾಗಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ಇದರ ಬೆನ್ನಲ್ಲೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಹೌದು… ಫೆಬ್ರವರಿ 8ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಈಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಂದೇಶದಲ್ಲಿ ಏರ್ಪೋರ್ಟ್ಗೆ ಆಗಮಿಸುವ ವಿಮಾನಗಳಿಗೆ ಡ್ರೋನ್ ಮುಖಾಂತರ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ರಾಜ್ಯದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ. ಪತ್ರ ಬರೆದು ಅವರಿಂದ ಪ್ರತಿಕ್ರಿಯೆ ಕೋರಲಾಗಿದೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ನಾನು ಬಾಂಬ್ ದಾಳಿ ಮಾಡುತ್ತೇನೆ ಎಂದು ದುಷ್ಕರ್ಮಿ ಬೆದರಿಕೆ ಹಾಕಿದ್ದಾನೆ. mahantesh6699@proton.mi ಈಮೇಲೆ ಸಂದೇಶವನ್ನು ಕಳುಹಿಸಲಾಗಿದ್ದು, ಇದರಲ್ಲಿ ಬೆಂಗಳೂರು, ಚೆನ್ನೈ ಹಾಗೂ ಕೇರಳದಿಂದ ಬರುವ ವಿಮಾನಗಳಿಗೆ ಡ್ರೋನ್ ಬಾಂಬ್ ದಾಳಿ ಮಾಡುವುದಾಗಿ ಹೇಳಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನ ಬಂದ ವ್ಯಕ್ತಿಗಳ ವಿಚಾರಣೆ ನಡೆಯುತ್ತಿದೆ. ನಿಲ್ದಾಣದಲ್ಲಿ ಒಳ ಹೋಗುವ ಹಾಗೂ ಒಳ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಅಲ್ಲದೆ ಬೆದರಿಕೆ ಬಂದ ಹಿನ್ನಲೆಯಲ್ಲಿ ಏರ್ ಶೋ ನಡೆಯುತ್ತಿರುವ ಸ್ಥಳದಲ್ಲೀ ಪೊಲೀಸ್ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ಬಿಎನ್ಎಸ್ 125, 351, 353 ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಏರ್ಪೋರ್ಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಡ್ರೋನ್ ಮೇಲ್ವಿಚಾರಣೆ ಮಾಡುವ ಮೂಲಕ ಪೊಲೀಸರು ಪ್ರಮುಖ ಪ್ರವೇಶ ದ್ವಾರಗಳಲ್ಲಿ ತಪಾಸಣೆಯೊಂದಿಗೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರಸ್ತುತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ.
ಅಲ್ಲದೆ ಯಲಹಂಕದಲ್ಲಿ ಏರ್ ಶೋಗೆ ಸಿದ್ದತೆಗಳು ನಡೆದಿವೆ. ಈ ಎರಡಕ್ಕೂ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ರಕ್ಷಣಾ ಕಂಪನಿಗಳು ಹಾಗೂ ವಾಯುಯಾನ ತಜ್ಞರು ಆಗಮಿಸಲಿದ್ದಾರೆ. ಈ ನಡುವೆ ಬಾಂಬ್ ಬೆದರಿಕೆ ಬಂದಿದ್ದು ಯಲಹಂಕ ವಾಯುನೆಲೆ ಸುತ್ತಾಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.